ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕೃಷಿಕರ ಜೀವನಾಡಿಯಾಗಿರುವ ಪುರಾತನ ಕೆರೆಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಎಂ. ಉದಯ್ ಶುಕ್ರವಾರ ಹೇಳಿದರು.ತಾಲೂಕಿನ ಆತಗೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ 8 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಆತಗೂರು ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.
ಪ್ರತಿ ಊರಿಗೊಂದು ಕೆರೆ ಅವಶ್ಯಕತೆ ಇದೆ, ಗ್ರಾಮಸ್ಥರು ಕೆರೆಗಳನ್ನು ರಕ್ಷಣೆ ಮಾಡಬೇಕು. ನಾಲೆಗಳ ಮೂಲಕ ಹರಿದು ಬರುವ ನೀರನ್ನು ಕೆರೆಗಳಿಗೆ ತಲುಪಿಸುವುದರಿಂದ ನೀರಿನ ಸಂಗ್ರಹಣೆಯೊಂದಿಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ತಾಲೂಕಿನ ಕೆಲವು ಕಡೆಗಳಲ್ಲಿ ಕೆರೆ, ಕಟ್ಟೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಮಾಡದ ಕಾರಣ ಬೇಸಿಗೆಯಲ್ಲಿ ಜನ, ಜಾನುವಾರು ಮತ್ತು ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ಎದುರಾಗಿತ್ತು. ತಾವು ಶಾಸಕರಾಗಿ ಆಯ್ಕೆಯಾದ ನಂತರ ಕೆರೆಕಟ್ಟೆಗಳ ಅಭಿವೃದ್ಧಿ ಜೊತೆಗೆ ರಸ್ತೆ ಮತ್ತು ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ಜನಪರ ಯೋಜನೆಗಳ ಜೊತೆಗೆ ಕೆರೆಗಳ ಪುನಶ್ಚೇತನಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ ವೇದಿಕೆ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ತಾಪಂ ಮಾಜಿ ಅಧ್ಯಕ್ಷ ಸಿ.ನಿಂಗೇಗೌಡ, ಕೆರೆ ಸಮಿತಿ ಗೌರವಾಧ್ಯಕ್ಷೆ ಲಲಿತಮ್ಮ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕಿ ಎಂ.ಚೇತನ, ಕೆರೆ ಸಮಿತಿ ಅಧ್ಯಕ್ಷೆ ಶಮಿತಾ, ಗ್ರಾಮ ಅಭಿವೃದ್ಧಿ ಅಧ್ಯಕ್ಷ ಶಶಿಧರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಂ.ಪಿ.ಲಿಂಗೇಗೌಡ, ಆತಗೂರು ಗ್ರಾಪಂ ಅಧ್ಯಕ್ಷ ಗೋವಿಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕರು ಇದ್ದರು.