ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮತ್ತು ಯುವಕರು ಮಣ್ಣಿನಿಂದ ದೂರವಾಗುತ್ತಿದ್ದಾರೆ. ಇಂತಹ ಕೆಸರುಗದ್ದೆ ಕ್ರೀಡೆಗಳು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಬೆಸೆಯುತ್ತವೆ ಎಂದು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಹೇಳಿದರು.

ಮಡಿಕೇರಿ; ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮತ್ತು ಯುವಕರು ಮಣ್ಣಿನಿಂದ ದೂರವಾಗುತ್ತಿದ್ದಾರೆ. ಇಂತಹ ಕೆಸರುಗದ್ದೆ ಕ್ರೀಡೆಗಳು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಬೆಸೆಯುತ್ತವೆ ಎಂದು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಹೇಳಿದರು.೨ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಮರಾಟಿ ಸಮುದಾಯದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾತನಾಡಿದರು.

ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ.ದೇವಪ್ಪ ಕಟ್ಟೆಮಾಡು ಉದ್ಘಾಟಿಸಿದರು. ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಅಧ್ಯಕ್ಷ ಎಂ.ಕೆ.ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಜಲಜಾನವೀನ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಂ.ನರಸಿಂಹ, ಜಿಲ್ಲಾ ಸಂಘದ ಕಾರ್ಯದರ್ಶಿ ಹೂವಮ್ಮ ಇತರರಿದ್ದರು.ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.

ವಿವಿಧ ಸ್ಪರ್ಧೆ: ಮೊಣಕಾಲುವರೆಗೆ ನೀರು ತುಂಬಿದ್ದ ಕೆಸರುಗದ್ದೆಯಲ್ಲಿ ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ, ಜತೆಗೆ ವೇಗದ ನಡಿಗೆ, ಕಂಬ ಸುತ್ತಿ ಓಡುವುದು, ಮಡಿಕೆ ಹೊಡೆಯುವುದು, ಜೋಡಿ ಓಟ, ಹಗ್ಗ ಜಗ್ಗಾಟ(೭ ಜನರ ತಂಡ), ಕೆಸರಿನಲ್ಲಿ ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಉಪ್ಪುಮೂಟೆ(ಬೆನ್ನಿನ ಮೇಲೆ ಓರ್ವ ವ್ಯಕ್ತಿಯನ್ನು ಹೊತ್ತು ಓಡುವುದು) ಓಟ ಮತ್ತು ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆ ಸೇರಿದಂತೆ ೧೪ ಬಗೆಯ ಸ್ಪರ್ಧೆಗಳು ನಡೆದವು.ಸಮಾರೋಪ ಸಮಾರಂಭವನ್ನು ಸಮಾಜದ ಹಿರಿಯರಾದ ಮರಾಟಿ ಸೋಮಪ್ಪ ಅವರು ಉದ್ಘಾಟಿಸಿದರು. ಕರ್ನಾಟಕ ಮರಾಟಿ ಒಕ್ಕೂಟ ಮೂಡಬಿದಿರೆ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಕರ್ನಾಟಕ ಮರಾಟಿ ಒಕ್ಕೂಟ ಬೆಂಗಳೂರು ಅಧ್ಯಕ್ಷ ಕೆ.ಸುಂದರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ದೇವಕಿ ಜಿ.ಆರ್.ನಾಯ್ಕ, ಪಿ.ಕೆ.ಗಂಗಾಧರ, ಮಹಿಳಾ ವೇದಿಕೆಯ ಅಧ್ಯಕ್ಷೆ ಜಲಜಾನವೀನ, ಯುವಕ ಸಂಘದ ಅಧ್ಯಕ್ಷ ಎಂ.ಕೆ.ಸಂತೋಷ್, ಎರಡನೇ ಮಣ್ಣಂಗೇರಿ ಉಪಸಮಿತಿ ಅಧ್ಯಕ್ಷ ಎಂ.ಎಸ್.ವೆಂಕಪ್ಪ, ಕುಂಡಾಡು ಉಪಸಮಿತಿ ಅಧ್ಯಕ್ಷ ಸಿ.ಎಚ್‌ಶ್ರೀಧರ್, ಕುದ್ರೆಪಾಯ ಉಪ ಸಮಿತಿ ಅಧ್ಯಕ್ಷ ಕೆ.ಜೆ.ಶಶಿಕಾಂತ್, ಕರಿಕೆ ಉಪಸಮಿತಿ ಅಧ್ಯಕ್ಷ ಕೆ.ಜಿ.ಹೊನ್ನಪ್ಪ, ಕಾನೂರು ಉಪಸಮಿತಿ ಅಧ್ಯಕ್ಷ ನಿರಲ್ ಕುಮಾರ್ ಸೇರಿದಂತೆ ಸಂಘದ ಪ್ರಮುಖರು ಇದ್ದರು.