ಗ್ರಾಮೀಣ ಬದುಕಿನ ಸಿರಿವಂತಿಕೆ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ
ಸಂಡೂರು: ಗ್ರಾಮೀಣ ಬದುಕಿನ ಸಿರಿವಂತಿಕೆ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಜಾನಪದ ಅಕಾಡೆಮಿಯ ಕುರುಗೋಡು ತಾಲೂಕು ಘಟಕದ ಅಧ್ಯಕ್ಷ ಚಾನಾಳ್ ಅಮರೇಶಪ್ಪ ತಿಳಿಸಿದರು.
ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಲಾ ಸಂಭ್ರಮ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.ಆಧುನಿಕತೆಯ ಭರಾಟೆಯ ನಡುವೆಯೂ ನಮ್ಮ ಮೂಲ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಗ್ರಾಮೀಣ ಸೊಗಡು ಮತ್ತು ಅಲ್ಲಿನ ಜೀವನ ಮೌಲ್ಯಗಳು ನಮ್ಮ ನಾಡಿನ ಆಸ್ತಿ. ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ಶಶಿಧರ ಮಾತನಾಡಿ, ಇತಿಹಾಸವೆಂದರೆ ಕೇವಲ ಯುದ್ಧಗಳು ಮತ್ತು ಇಸವಿಗಳ ಪಟ್ಟಿಯಲ್ಲ. ಆ ಮಾಹಿತಿಯೆಲ್ಲವೂ ಇಂದು ಮೊಬೈಲ್‌ನಲ್ಲೇ ಲಭ್ಯವಿದೆ. ಇತಿಹಾಸವು ಭವಿಷ್ಯಕ್ಕೆ ನೆರವಾಗುವ ಒಳನೋಟಗಳನ್ನು ನೀಡಬೇಕು. ಇತಿಹಾಸದಲ್ಲಿ ದಾಖಲಾಗಿರುವುದಕ್ಕಿಂತ, ದಾಖಲಾಗದೇ ಉಳಿದಿರುವುದು ಬಹಳಷ್ಟಿದೆ. ವಿದ್ಯಾರ್ಥಿಗಳು ಅಂತಹ ಅಜ್ಞಾತ ಸಂಗತಿಗಳನ್ನು ಶೋಧಿಸಿ ಬರೆಯಬೇಕು ಮತ್ತು ಅವುಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ತಿಳಿಸಿದರು.ಕ್ರೀಡಾ ನಿರ್ದೇಶಕ ಶಿವರಾಮಪ್ಪ ರಾಗಿ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿನಂತೆ ಪ್ರತಿಯೊಬ್ಬರಿಗೂ ಇತಿಹಾಸದ ಅರಿವು ಮುಖ್ಯ. ಭವಿಷ್ಯದ ನಿರ್ಮಾಣಕ್ಕೆ ಗತಕಾಲದ ಅರಿವು ದಾರಿದೀಪವಾಗಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಅಧ್ಯಾಪಕ ಡಾ. ವಿರುಪಾಕ್ಷಪ್ಪ, ಡಾ. ಟಿ.ಎಸ್. ನರಸಿಂಹಮೂರ್ತಿ ಮಾತನಾಡಿದರು. ಕನ್ನಡ ವಿಭಾಗದ ಡಾ. ಮಲ್ಲಯ್ಯ ಸಂಡೂರು ಹಾಗೂ ಶಿವಕುಮಾರ್ ಉಪಸ್ಥಿತರಿದ್ದರು.