ಸಾರಾಂಶ
ರಾಣಿಬೆನ್ನೂರು: ಜಾನಪದ ಉತ್ಸವಗಳಿಂದ ಸಾಮಾಜಿಕ ಮೌಲ್ಯ ಉಳಿಸಲು ಮತ್ತು ಸಂಸ್ಕೃತಿ ಬೆಳಗಿಸಲು ಸಾಧ್ಯ ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ತಿಳಿಸಿದರು.ನಗರದ ಬಿಎಜೆಎಸ್‌ಎಸ್ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದರು ಹಾಕಿಕೊಟ್ಟ ಮಾರ್ಗ ಜಗತ್ತಿಗೆ ಮಾದರಿಯಾಗಿದೆ. ಭಾರತೀಯ ಸಂಸ್ಕೃತಿಯನ್ನು ಅನೇಕ ದೇಶಗಳು ಅನುಸರಿಸುತ್ತಿದ್ದು, ಅದರ ಅಧ್ಯಯನಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಇರುವುದು ನಮ್ಮೆಲ್ಲರ ಭಾಗ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ಮೂಲ ಜಾನಪದ ಹಳ್ಳಿಗಳಲ್ಲಿ ಉಳಿದಿದ್ದು, ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಜಾನಪದ ಅಧ್ಯಯನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದರು. ಹಿರಿಯ ಜಾನಪದ ಕಲಾವಿದ ಕೆ.ಸಿ. ನಾಗರಜ್ಜಿ ಮಾತನಾಡಿ, ಆಧುನಿಕ ಜಾನಪದ ಸಿನಿಮಾ ಹಾಡಿನ ಸಂಸ್ಕೃತಿಯೊಂದಿಗೆ ಮನಸ್ಸನ್ನು ಅರಳಿಸದೆ ಕೆರಳಿಸುತ್ತಾ ಬೇರೆ ಹಾದಿ ಹಿಡಿದಿರುವುದು ವಿಷಾದಕರ. ವಿದ್ಯಾರ್ಥಿಗಳು ಅಂತಹ ಮಾರ್ಗಕ್ಕೆ ಗಮನ ಕೊಡದೆ ಮೂಲ ಜಾನಪದವನ್ನು ಉಳಿಸಲು ಗೀಗೀ ಪದ, ಸೋಬಾನೆ ಪದ, ಹಂತಿಪದ, ಜಾನಪದ ಆಟಗಳು, ಕತೆಗಳು ಮುಂತಾದ ಪ್ರಕಾರಗಳ ಬಗೆಗೆ ಅಧ್ಯಯನ ಮಾಡಬೇಕು ಎಂದರು. ಪ್ರಾ. ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಕುಂಚೂರ, ಎಂ.ಡಿ. ಹೊನ್ನಮ್ಮನವರ, ಗೀತಾ ಎಸ್.ಎಚ್., ವಿನಾಯಕ ಎಕ್ಕನಹಳ್ಳಿ, ಮಹೇಶ ಕಂಬಳಿ, ಜಯಂತ ಕುರುಬರ, ಸಂತೋಷ ನಿಟ್ಟೂರ, ಶರತಕುಮಾರ ನೂಲಗೆರಿ, ಪ್ರವೀಣ ಎನ್. ಉಪಸ್ಥಿತರಿದ್ದರು.ಭರವಸೆ ಈಡೇರಿಕೆ ಜನಪ್ರತಿನಿಧಿಗಳ ಹೊಣೆ
ಬ್ಯಾಡಗಿ: ಜನತೆಗೆ ಕೊಟ್ಟ ಭರವಸೆ ಈಡೇರಿಸುವುದು ಶಾಸಕನಾಗಿ ನನ್ನ ಪ್ರಮುಖ ಜವಾಬ್ದಾರಿ. ಅಂತೆಯೇ ಬಡಮಲ್ಲಿ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನ ನಿರ್ಮಿಸಲು ಅಗತ್ಯವಾದ ಅನುದಾನ ನೀಡುವ ಮೂಲಕ ಕೊಟ್ಟ ಮಾತನ್ನು ಈಡೇರಿಸಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಬಡಮಲ್ಲಿ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಮೊದಲ ಹಂತದ 5 ಲಕ್ಷ ಬಿಡುಗಡೆಗೊಳಿಸಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಭಕ್ತರು ಸೇರಿದಂತೆ ಗ್ರಾಮದ ಹಿರಿಯರು ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಅನುದಾನ ನೀಡಲು ಬೇಡಿಕೆಯಿಟ್ಟಿದ್ದು, ಇದೀಗ ಅದನ್ನು ಈಡೇರಿಸಿದ್ದೇನೆ ಎಂದರು. ಹಿಂದಿನ ಅವಧಿಯಲ್ಲಿ ಈಗಾಗಲೇ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ 15 ಲಕ್ಷ ಸಿದ್ದರಾಮೇಶ್ವರ ದೇವಸ್ಥಾನಕ್ಕೆ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪಾಂಡುರಂಗ ದೇವಸ್ಥಾನಕ್ಕೂ 15 ಲಕ್ಷ ಹೆಚ್ಚುವರಿ ನೀಡುವೆ. ಗ್ರಾಮಸ್ಥರು ಸಹಕಾರದಿಂದ ಜೀವನ ನಡೆಸುವ ಮೂಲಕ ಬೇರೆ ಗ್ರಾಮಕ್ಕೆ ಮಾದರಿಯಾಗಿರಬೇಕು ಎಂದರು.ತಾಲೂಕಿನ ಮಲೆನಾಡು ಭಾಗದ ಸುಮಾರು 23 ಗ್ರಾಮಗಳಿಗೆ ನೀರಾವರಿ ಯೋಜನೆಗಳು ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗಿದ್ದು, ಹೆಚ್ಚು ಅನುದಾನ ತರುವ ಮೂಲಕ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.
ಈ ವೇಳೆ ಪಾಂಡುರಂಗ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮೇವುಂಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಶಿವನಗೌಡ ವೀರನಗೌಡ್ರ, ಬಸನಗೌಡ ಸಣ್ಣಗೌಡ್ರ, ನಾಗರಾಜ ಆನ್ವೇರಿ, ಗದಿಗೆಪ್ಪಗೌಡ ಹೊಂಡದಗೌಡ್ರ, ನಾಗಪ್ಪ ಓಲೇಕಾರ, ಬಸಪ್ಪ ಗೊಂದಿ ಇತರರಿದ್ದರು.