ಕನ್ನಡಪ್ರಭ ವಾರ್ತೆ ಬೇಲೂರು
ಪುರಾತತ್ವ ಇಲಾಖೆಯ ನಿಯಮಗಳಿಗೆ ಧಕ್ಕೆ ಆಗದಂತೆ ದೇಗುಲ ಸಂರಕ್ಷಣೆಯ ಜೊತೆಗೆ ಧಾರ್ಮಿಕ ಆಚರಣೆಗಳನ್ನು ಯಾವುದೇ ಗೊಂದಲ ಇಲ್ಲದಂತೆ ನಡೆಸಿಕೊಂಡು ಸಮತೋಲನ ಕಾಪಾಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಚನ್ನಕೇಶವ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವು ಜೀವಂತ ಧಾರ್ಮಿಕ ಕೇಂದ್ರವಾಗಿದ್ದು, ಇಲ್ಲಿ ಪ್ರತಿದಿನ ಪೂಜೆ- ಪುನಸ್ಕಾರಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪುರಾತತ್ವ ಇಲಾಖೆಯು ದೇವಾಲಯದ ಮೂಲ ರಚನೆ ಹಾಗೂ ಅಮೂಲ್ಯ ಶಿಲ್ಪಕಲೆಗಳ ಸಂರಕ್ಷಣೆಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸುವುದು ಅನಿವಾರ್ಯವಾಗಿದೆ. ಆದರೆ, ಕೆಲ ಸಂದರ್ಭಗಳಲ್ಲಿ ಈ ನಿಯಮಗಳು ಭಕ್ತರ ಧಾರ್ಮಿಕ ಆಚರಣೆಗಳ ನಡುವೆ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಇಲಾಖೆಯ ನಿಯಮಗಳನ್ನು ಪಾಲಿಸುವುದರ ಜೊತೆಗೆ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರು ಶಿಲ್ಪಗಳು ಹಾಗೂ ವಿಗ್ರಹಗಳನ್ನು ಮುಟ್ಟುವುದು, ಅವುಗಳ ಮೇಲೆ ಕುಳಿತು ಫೋಟೋ ತೆಗೆಯುವುದು ಸೇರಿದಂತೆ ಪರಂಪರೆಗೆ ಹಾನಿಯುಂಟು ಮಾಡುವ ಕೃತ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು. ನಿಯಮಗಳ ಪಟ್ಟಿಯನ್ನು ಪ್ರದರ್ಶಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರಿಗೆ ₹500 ರಿಂದ ₹1000 ವರೆಗೆ ದಂಡ ವಿಧಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ . ದೇವಾಲಯದ ಸ್ವಚ್ಛತೆ, ಕುಡಿಯುವ ನೀರು, ವಾಹನ ನಿಲುಗಡೆ, ಭದ್ರತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಲಾಗಿದೆ. ಹೊಯ್ಸಳರ ಕಾಲದ ಅದ್ಭುತ ಶಿಲ್ಪಕಲೆ ವಿಶ್ವದ ಗಮನ ಸೆಳೆಯುವಂತಿದ್ದು, ಈ ಅಮೂಲ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಯೋಗೇಶ್, ಪುರಸಭೆ ಅಧ್ಯಕ್ಷ ಅಕ್ರಮ್ ಪಾಷಾ, ಪುರಸಭೆ ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ್, ರತ್ನಾ ಸತ್ಯನಾರಾಯಣ, ಶೈಲೇಶ್, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ, ವಿವಿಧ ಇಲಾಖೆಗಳ ಅಧಿಕಾರಿಗಳು, ದೇವಸ್ಥಾನದ ಮಾರ್ಗದರ್ಶಕ ತಾರಾನಾಥ್, ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.