ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆ.30 ರಂದು ಚುನಾವಣೆ ಜರುಗಲಿದೆ. ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ. ಆದರೆ, ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೋ, ಶಾಸಕರ ಬಣದಿಂದ ಗುರುತಿಸಿಕೊಂಡವರು ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೋ ಎಂಬುವುದು ಇಂದು ನಿರ್ಧಾರವಾಗಲಿದೆ.ಪುರಸಭೆ ಒಟ್ಟು 23 ಸದಸ್ಯ ಬಲ ಹೊಂದಿದೆ. ಅದರಲ್ಲಿ 15 ಜನ ಕಾಂಗ್ರೆಸ್ ಸದಸ್ಯರು, 5 ಜನ ಜೆಡಿಎಸ್ ಸದಸ್ಯರು, ಇಬ್ಬರು ಬಿಜೆಪಿ ಮತ್ತು ಒಬ್ಬರು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ ಸದಸ್ಯರಲ್ಲಿಯೇ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಣದಲ್ಲಿ 6 ಜನ ಸದಸ್ಯರು ಒಂದು ಕಡೆ ಇದ್ದರೆ, ಸಿಎಂ ಸಿದ್ಧರಾಮಯ್ಯ ಅಭಿಮಾನಿ ಬಳಗದಲ್ಲಿ 10 ಜನ ಸದಸ್ಯರಿದ್ದಾರೆ. ಜೆಡಿಎಸ್ ಸದಸ್ಯರು ಪಕ್ಷದ ಮುಖಂಡರ ಮಾತಿಗೆ ಬೆಲೆ ಕೊಡದೇ ಅವರಲ್ಲಿ 4 ಜನ ಹಾಗೂ ಬಿಜೆಪಿಯ ಒಬ್ಬ ಸದಸ್ಯರೂ ಪ್ರಯಾಣದಲ್ಲಿ ಅವರೊಂದಿಗಿದ್ದಾರೆ. ಅಂದರೆ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಬಣದ 10 ಜನ ಹಾಗೂ ಬಿಜೆಪಿ, ಜೆಡಿಎಸ್, ಪಕ್ಷೇತರ ಸೇರಿ 5 ಜನ ಹೀಗೆ ಒಟ್ಟು 15 ಜನ ಸದಸ್ಯರು ಒಂದೇ ಕಡೆ ಪ್ರವಾಸದಲ್ಲಿದ್ದೂ ನೇರವಾಗಿ ಚುನಾವಣಾ ಸ್ಥಳಕ್ಕೆ ಬಂದು ಮತ ಚಲಾಯಿಸುವ ವದಂತಿಗಳು ದಟ್ಟವಾಗಿವೆ. ಇನ್ನು ಶಾಸಕರ ಬಣದಲ್ಲಿ ಕೇವಲ 5-6 ಜನ ಇದ್ದೂ ಅವರು ಸಿದ್ಧರಾಮಯ್ಯ ಬಣದ ಅಧ್ಯಕ್ಷ ಅಭ್ಯರ್ಥಿಗೆ ಕೈ ಎತ್ತುವರೋ ಅಥವಾ ತಟಸ್ಥವಾಗಿ ಉಳಿಯುವರೋ ಕಾದು ನೋಡಬೇಕು.
ಕಳೆದ 8 ದಿನಗಳ ಹಿಂದೆಯೇ ಊರು ಬಿಟ್ಟಿರುವ ಸಿದ್ಧರಾಮಯ್ಯ ಬಣದ ಕಾಂಗ್ರೆಸ್ ಸದಸ್ಯರಲ್ಲಿ ಜ್ಯೋತಿ ಆಲೂರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಬಲವಾಗಿ ಕೇಳಿ ಬರುತ್ತಿದೆ. ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಮೀಸಲಾಗಿರುವುದರಿಂದ ಶಾಸಕರ ಬಣದಲ್ಲಿ ಗುರ್ತಿಸಿಕೊಂಡಿರುವ ತಾಯಿ ಮತ್ತು ಮಗ ಇವರಿಬ್ಬರಲ್ಲಿ ರಾಜಶೇಖರ ಹೆಬ್ಬಳ್ಳಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ಒಟ್ಟಾರೆ ಅಧಿಕಾರಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಇಬ್ಬಾಗವಾಗಿದ್ದೂ, ಬಣ ರಾಜಕಾರಣ ಪಟ್ಟಣದ ಪುರಸಭೆಯಲ್ಲಿ ಕಂಡು ಬಂದಿದೆ. ಶಾಸಕರ ಬಣದಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಸಿದ್ದರಾಮಯ್ಯ ಬಣದ ಸದಸ್ಯರೇ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನದ ಗದ್ದುಗೆ ಏರುವ ಸಂಭವನೀಯ ಲೆಕ್ಕಾಚಾರಗಳು ನಡೆದಿರುವುದು ದಟ್ಟವಾಗಿ ಕೇಳಿಬರುತ್ತಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಸ್ಥಾನಕ್ಕೆ ನಿಗದಿಯಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಾಮನಿರ್ದೇಶನ ಪತ್ರ ಸಲ್ಲಿಸಲು ಸಮಯ ನೀಡಲಾಗಿದೆ. ಮಧ್ಯಾಹ್ನ 2 ಗಂಟೆಗೆ ಸಭೆ ಪ್ರಾರಂಭವಾದ ತಕ್ಷಣ ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ನಾಮಪತ್ರಗಳ ಪರಿಶೀಲನೆ ನಂತರ 10 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ನಂತರ ಮಧ್ಯಾಹ್ನ 2.11 ಗಂಟೆಗೆ ಮೊದಲು ಅಧ್ಯಕ್ಷರ ಚುನಾವಣೆ ನಂತರ ಉಪಾಧ್ಯಕ್ಷರ ಚುನಾವಣೆ ನಡೆಯುತ್ತದೆ.