ಸಾರಾಂಶ
ಹುಬ್ಬಳ್ಳಿ:
ಕನ್ನಡಪ್ರಭ ಹುಬ್ಬಳ್ಳಿ ವರದಿಗಾರ ಅಜೀಜಅಹ್ಮದ ಬಳಗಾನೂರ, ಛಾಯಾಗ್ರಾಹಕ ಈರಪ್ಪ ನಾಯ್ಕರ ಸೇರಿದಂತೆ 17 ಜನ ಪತ್ರಕರ್ತರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಲಭಿಸಿದ್ದು, ಜು. 29ರಂದು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಸಕ್ತ ಸಾಲಿನಲ್ಲಿ ಮಾಧ್ಯಮ ಮಿತ್ರರಿಗಾಗಿ ವೃತ್ತಿಪರತೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ವರದಿ, ಲೇಖನ, ಛಾಯಾಚಿತ್ರ, ಪುಟವಿನ್ಯಾಸ ಇತ್ಯಾದಿ ವಿಭಾಗಗಳಲ್ಲಿ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅವುಗಳನ್ನು ಪರಿಶೀಲಿಸಿ ಪ್ರಶಸ್ತಿ ಘೋಷಿಸಲಾಗಿದೆ ಎಂದರು.
ಯಾರ್‍ಯಾರಿಗೆ ಪ್ರಶಸ್ತಿ:ಕಮಲವ್ವ ಸೋಮಶೇಖರಪ್ಪ ಬುರ್ಲಬುಡ್ಡಿ ಹೆಸರಲ್ಲಿ ಕೊಡುವ ನಗರದ ಅತ್ಯುತ್ತಮ ವರದಿಗಾರಿಕೆ ಪ್ರಶಸ್ತಿಗೆ ಕೃಷ್ಣಿ ಶಿರೂರು (ಪ್ರಜಾವಾಣಿ), ಲಿಂ. ಮುರಿಗೆಮ್ಮ ಬಸಪ್ಪ ಹೂಗಾರ ಹೆಸರಲ್ಲಿ ಕೊಡುವ ಶಶಿಧರ ಬುದ್ನಿ (ಉದಯವಾಣಿ) ಆಯ್ಕೆಯಾಗಿದ್ದಾರೆ. ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ ಹೆಸರಲ್ಲಿ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿಗೆ ಅಜೀಜಅಹ್ಮದ ಬಳಗಾನೂರ (ಕನ್ನಡಪ್ರಭ), ಕೃಷಿ ಲೇಖನ ಪ್ರಶಸ್ತಿಗೆ ವಿರೂಪಾಕ್ಷ ಗುದ್ನಯ್ಯನವರಮಠ (ವಿಜಯವಾಣಿ), ಜಿತೇಂದ್ರ ದಯಾಳಜಿ ಮೆಜೇಥಿಯಾ ಗ್ರಾಮೀಣ ವರದಿಗಾರಿಕಾ ಪ್ರಶಸ್ತಿಗೆ ಶ್ರೀಶೈಲ ಗೌರಿಮಠ (ಉದಯವಾಣಿ), ಸಾಹಿತಿ ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಗ್ರಾಮೀಣ ಲೇಖನ ಪ್ರಶಸ್ತಿಗೆ ಕಲಘಟಗಿಯ ಪ್ರಹ್ಲಾದ ಗೊಲ್ಲಗೌಡರ (ವಿಜಯ ಕರ್ನಾಟಕ) ಭಾಜನರಾಗಿದ್ದಾರೆ ಎಂದರು.
ದಿ. ರಾಮುಶೆಟ್ಟಿ ಆಂಗ್ಲ ವರದಿಗಾರಿಕಾ ಪ್ರಶಸ್ತಿಗೆ ಗಿರೀಶ ಪಟ್ಟಣಶೆಟ್ಟಿ (ದಿ. ಹಿಂದು), ಈ ಬಾರಿ ಘೋಷಣೆಯಾದ ಲೀಲಾವತಿ ವಿಶ್ವನಾಥ ಶೆಟ್ಟಿ ತನಿಖಾ ವರದಿ ಪ್ರಶಸ್ತಿಗೆ ಮಾಲತೇಶ ಹೂಲಿಹಳ್ಳಿ (ಸಂಯುಕ್ತ ಕರ್ನಾಯಕ), ಡಾ. ಬಿ.ಎಫ್. ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಗೆ ಸಾಯಿರಾಮ ಪವಾರ (ಸಂಯುಕ್ತ ಕರ್ನಾಟಕ) ಆಯ್ಕೆಯಾಗಿದ್ದಾರೆ ಎಂದರು.ಸಾಹಿತಿ ದಿ. ಎಂ.ಡಿ. ಗೋಗೇರಿ ಸ್ಮರಣೆಯ ಉತ್ತಮ ಛಾಯಾಚಿತ್ರ ಪ್ರಶಸ್ತಿಗೆ ಸಂತೋಷ ಈಳಿಗೇರ (ವಿಜಯ ಕರ್ನಾಟಕ), ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಗೆ ಈರಪ್ಪ ನಾಯ್ಕರ (ಕನ್ನಡಪ್ರಭ), ಟಿವಿ ವರದಿಗಾರಿಕಾ ಪ್ರಶಸ್ತಿಗೆ (ತನಿಖೆ) ವರದಿಗಾರ ಪ್ರಕಾಶ ಹಿರೇಮಠ, ಕ್ಯಾಮೆರಾಮನ್: ವಿನಾಯಕ ಪೂಜಾರಿ (ಆರ್. ಕನ್ನಡ), ಟಿವಿ ವರದಿಗಾರಿಕಾ ಪ್ರಶಸ್ತಿ (ಮಾನವೀಯ) ಪ್ರಶಸ್ತಿಗೆ ವರದಿಗಾರ ಸುನೀಲ ಪಾಟೀಲ, ಕ್ಯಾಮೆರಾಮನ್ ನಾರಾಯಣಗೌಡ ಪಾಟೀಲ (ಪಬ್ಲಿಕ್ ಟಿವಿ), ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಗೆ ಹಜರತ್ ನದಾಫ್, ಸ್ತ್ರೀ ಸಬಲೀಕರಣ ವಿಶೇಷ ಪ್ರಶಸ್ತಿಗೆ ಲಕ್ಷ್ಮೀ ಮೊರಬ (ಹೊಸದಿಗಂತ) ಆಯ್ಕೆಯಾಗಿದ್ದಾರೆ ಎಂದರು.
ತೀರ್ಪುಗಾರರಾಗಿ ಹಿರಿಯ ಪತ್ರಕರ್ತರಾದ ಎನ್. ಮಂಜುನಾಥ ಭಟ್, ಅರುಣಕುಮಾರ ಹಬ್ಬು, ಎಂ.ಎಂ. ಪಾಟೀಲ, ಛಾಯಾಚಿತ್ರ ತೀರ್ಪುಗಾರರಾಗಿ ಶಶಿ ಸಾಲಿ, ಪತ್ರಿಕಾ ಅಕಾಡೆಮಿ ಸದಸ್ಯ ವೆಂಕಟೇಶ, ಹಿರಿಯ ಪತ್ರಕರ್ತ ವಿಜಯ ಮಲಗಿಹಾಳ ಕಾರ್ಯ ನಿರ್ವಹಿಸಿದ್ದಾರೆ ಎಂದರು.ಸಮಾರಂಭ ಉದ್ಘಾಟನೆ:
ಅಂದು ನಡೆಯುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲಿಕ್ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಜೀವಮಾನ ಪ್ರಶಸ್ತಿಗೆ ಭಾಜನರಾಗಿರುವ ಎಚ್.ಜಿ. ಬೆಳಗಾಂವಕರ್ ಹಾಗೂ ಅವ್ವ ಪತ್ರಕರ್ತೆ ಪ್ರಶಸ್ತಿಗೆ ಭಾಜರಾಗಿರುವ ಸುಧಾ ಶರ್ಮಾ ಚವತ್ತಿ ಉಪಸ್ಥಿತರಿರುವರು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರಾಚಾರ್ಯ ಕುಂದರಗಿ, ಸಂಘದ ಉಪಾಧ್ಯಕ್ಷ ವಿಜಯ ಹೂಗಾರ, ಕಾರ್ಯದರ್ಶಿ ವೀರೇಶ ಹಂಡಿಗಿ, ಖಜಾಂಚಿ ಬಸವರಾಜ ಹೂಗಾರ ಇದ್ದರು.