ಸಾರಾಂಶ
ಮೋಹನ್ ರಾಜ್ ಕನ್ನಡಪ್ರಭ ವಾರ್ತೆ ಮಡಿಕೇರಿ
ಐತಿಹಾಸಿಕ ಹಿನ್ನೆಲೆಯುಳ್ಳ ಗೌರಿ ಗಣೇಶ ಹಾಗೂ ದಸರಾ ಹಬ್ಬದ ಸಂಭ್ರಮದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಡಿಜೆ ಬಳಕೆಯನ್ನು ಕೈಬಿಟ್ಟು ಭಾರತೀಯ ಸಂಸ್ಕೃತಿಯ ಬ್ಯಾಂಡ್ ವಾದ್ಯಗಳ ಬಳಕೆಯತ್ತ ಒಲವು ತೋರಲು ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ.ಈಗಾಗಲೇ ಡಿಜೆ ಬಳಕೆಯನ್ನು ಕೈಬಿಡಲು ಪೊಲೀಸ್ ಇಲಾಖೆ ಕೂಡ ಹಬ್ಬಾಚರಣ ಸಮಿತಿಗಳ ಜತೆ ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿದೆ.ಡಿಜೆ ಕೇವಲ ಮೋಜು ಮಸ್ತಿಗಾಗಿ ವಿದೇಶಿಗರು ಪರಿಚಯಿಸಿದ ಸಾಧನ. ಇದನ್ನೇ ಇಂದು ನಾವು ಹಬ್ಬ ಹರಿದಿನಗಳಲ್ಲಿ ಬಳಸಲು ಪ್ರಾರಂಭಿಸಿದ್ದೇವೆ. ಇದರಿಂದ ಇಡೀ ಸಮಾಜಕ್ಕೆ, ಪರಿಸರಕ್ಕೆ ಧಕ್ಕೆಯಾಗುತ್ತಿರುವುದಂತೂ ನೂರರಷ್ಟು ಸತ್ಯ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆಗಿದ್ದರೂ ಕೂಡ ಧಾರ್ಮಿಕ ಹಿನ್ನೆಲೆಯುಳ್ಳ ಹಬ್ಬಾಚರಣೆ ಸಂದರ್ಭ ಡಿಜೆ ಬಳಕೆ ಮಾಡುತ್ತಿರುವುದು ಸಂಪ್ರದಾಯಸ್ಥರ ಆಕ್ಷೇಪಕ್ಕೂ ಕಾರಣವಾಗಿದೆ.ಡಿಜೆ ಬಳಕೆಯೂ ಮನೆಯಲ್ಲಿರೋ ಹಿರಿಯರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಮಕ್ಕಳು ಸೇರಿದಂತೆ ಪ್ರಾಣಿ ಪಕ್ಷಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಲಕ್ಷಾಂತರ ರುಪಾಯಿ ವ್ಯಯಮಾಡಿ ನಾವೇ ನಮ್ಮ ಸಮುದಾಯಕ್ಕೆ ಮಾರಕವಾಗುತ್ತಿದ್ದೇವೆ ಎಂದರೆ ತಪ್ಪಾಗಲಾರದು.ದುಂದುವೆಚ್ಚ:ಉತ್ಸವಗಳಲ್ಲಿ ಡಿಜೆ ಬಳಕೆಗೆ ಕಡಿವಾಣ ಹಾಕಿದ್ದೆ ಆದಲ್ಲಿ ದುಬಾರಿ ವೆಚ್ಚಕ್ಕೆ ಬ್ರೇಕ್ ಬೀಳಲಿದ್ದು, ಸಮಿತಿ ಹಾಗೂ ಆಡಳಿತ ಮಂಡಳಿಗಳಿಗೆ ಒಂದಿಷ್ಟು ಮೊತ್ತ ಉಳಿಯುತ್ತದೆ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಹಬ್ಬಾಚರಣೆ ಸಂದರ್ಭ ಜನ ದಟ್ಟಣೆ ನಡುವೆ ಡಿಜೆ ಸೆಟ್‌ಗಳಿಗೆ ವಾಹನಗಳನ್ನು ಬಳಸುತ್ತಿರುವುದರಿಂದ ಅನಾಹುತ ಕೂಡ ಸಂಭವಿಸುವ ಸಾಧ್ಯತೆ ಹೆಚ್ಚು.ಬಲಿಯಾದ ಜನಪದ ಕಲೆಗಳು:
ಹಿಂದೆ ಹಬ್ಬ ಸಮಾರಂಭಗಳಲ್ಲಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೊಡಗಿನ ಬಾಳೋ ಬಾಳೋ ಕುಣಿತ, ಗೊಂಬೆ ಕುಣಿತ, ಕರಗದ ಕುಣಿತ, ಜತೆಗೆ ಚಂಡೆ, ಡೋಲು, ಕೊಡಗಿನ ವಲಗ, ಎಂತವರನ್ನು ನಿಂತಲ್ಲೇ ಕುಣಿಯುವಂತೆ ಮಾಡುತ್ತಿದ್ದ ಡ್ರಮ್ಸ್ ವಾದ್ಯಗಳು ಡಿಜೆ ಅಬ್ಬರದ ನಡುವೆ ಇಂದು ಕಣ್ಮರೆಯಾಗುತ್ತಿದ್ದು, ಇದನ್ನೇ ನಂಬಿದ್ದ ನೂರಾರು ಕುಟುಂಬಗಳು ಇಂದು ಬೇರೆ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಇವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎನ್ನುವ ಕುರಿತು ಜಾಲತಾಣಗಳಲ್ಲೂ ಚರ್ಚೆಗಳು ನಡೆಯುತ್ತಿವೆಸಮಾಜಕ್ಕೆ ಪರಿಸರಕ್ಕೆ ಮಾರಕವಾಗಿರುವ ಡಿಜೆ ಸಂಸ್ಕೃತಿಯನ್ನು ಕೈಬಿಟ್ಟು ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳಿಗೆ ಒತ್ತು ನೀಡುವ ಕೆಲಸ ಆಗಬೇಕು. ಇದರಿಂದ ಲಕ್ಷಾಂತರ ರುಪಾಯಿ ದುಂದುವೆಚ್ಚ ಆಗುವುದನ್ನು ತಡೆಯಬಹುದು. ಜತೆಗೆ ಕಲಾವಿದರನ್ನು ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗುತ್ತೇ ಜತೆಗೆ ನೂರಾರು ಮಂದಿಗೆ ಉದ್ಯೋಗ ದೊರಕಿದಂತಾಗುತ್ತೆ.। ಪ್ರತೀಕ್ ಪೊನ್ನಣ್ಣ, ಸಾಮಾಜಿಕ ಹೋರಾಟಗಾರಡಿಜೆ ಬಳಕೆಯಿಂದ ಹೆಚ್ಚಿನ ಶಬ್ಧ ಮಾಲಿನ್ಯ ಉಂಟಾಗುತ್ತಿದ್ದು, ಗರ್ಭಿಣಿಯರು, ಮಕ್ಕಳು, ವಯೋವೃದ್ಧರು, ಹೃದಯ ಸಂಬಂಧಿ ರೋಗಿಗಳು, ನವಜಾತ ಶಿಶುಗಳಿಗೆ ತೊಂದರೆಗೀಡಾಗುತ್ತಿದ್ದಾರೆ. ಅಲ್ಲದೆ ಹೃದಯಾಘಾತ, ಕಿವಿ ಹಾನಿ, ಮಾನಸಿಕ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚುತ್ತಿದ್ದು, ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಈ ಡಿಜೆ ಸಂಸ್ಕೃತಿಯನ್ನು ಪ್ರಜ್ಞಾವಂತ ನಾಗರಿಕರಾದ ನಾವು ಕೈಬಿಟ್ಟು ಜನಪದ ಕಲೆಗಳತ್ತ ಒಲವು ತೋರುವಂತಾಗಬೇಕು. ಕೊಡಗಿನಲ್ಲಿ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಮಾದರಿಯ ಹಬ್ಬಾಚರಣೆ ನಡೆಯಬೇಕೆನ್ನುವುದೇ ಇಲಾಖೆ ಹಾಗೂ ಸಾರ್ವಜನಿಕರ ಆಶಯ. ಇದಕ್ಕೆ ಹಬ್ಬ ಆಚರಣಾ ಸಮಿತಿ ಹಾಗೂ ಆಡಳಿತ ಮಂಡಳಿಗಳು ಕೂಡ ಸಹಕಾರ ನೀಡಬೇಕು.
। ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಜೆ ಸಂಸ್ಕೃತಿ ಬಂದ ನಂತರ ಜನಪದ ಸಂಸ್ಕೃತಿಯನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಚೆಂಡೆ, ವಾಲಗ, ಡೋಲು, ಡ್ರಮ್ಸ್ ಮುಂತಾದ ವಾದ್ಯಗೋಷ್ಠಿಗಳಿಗೆ ಹಬ್ಬಾಚರಾಣೆಗಳ ಸಂದರ್ಭ ಅವಕಾಶ ನೀಡದೆ ಡಿಜೆ ಬಳಕೆ ಅತಿಯಾಗಿದ್ದು, ವಾದ್ಯಗೋಷ್ಠಿಗಳನ್ನು ನುಡಿಸಿ ಜೀವನ ಸಾಗಿಸುತ್ತಿದ್ದ ನಮ್ಮಂಥವರ ಬದುಕು ದುಸ್ತರವಾಗಿದೆ. ನೂರಾರು ಮಂದಿಯ ಕಸುಬನ್ನು ಡಿಜೆ ಕಸಿದುಕೊಂಡಿದೆ. ಹಿಂದೆಯೆಲ್ಲ ಹಬ್ಬಗಳು ಬಂದ ಕೂಡಲೇ ನಮ್ಮನ್ನು ಸಂಪರ್ಕಿಸಿ ಬುಕಿಂಗ್ ಮಾಡಿಕೊಳ್ಳುತ್ತಿದ್ದರು. ಈಗಿನ ಯುವ ಪೀಳಿಗೆ ದಾರಿ ತಪ್ಪುತ್ತಿದೆ ನಮ್ಮ ಧಾರ್ಮಿಕ ಹಿನ್ನೆಲೆಯುಳ್ಳ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಅವಂಬಿಸುತ್ತಿದ್ದಾರೆ ಇದು ನಿಜಕ್ಕೂ ವಿಷಾದನೀಯ ಸಂಗತಿ.। ಶ್ರೀನಿವಾಸ್, ಮಾಲೀಕರು ವೆಂಕಟೇಶ್ವರ ವಾದ್ಯಗೋಷ್ಠಿ ಅಮ್ಮತ್ತಿ.