ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರು
ಅಗೆದು ಬಿಟ್ಟಿರುವ ರಸ್ತೆಗಳು, ಜಲ್ಲಿ ಹರಡಿ ಮಾಯವಾದ ಅಧಿಕಾರಿಗಳು, ಕಲ್ಲು–ಗುಂಡಿಗಳ ಹಾದಿಯಲ್ಲಿ ವಾಹನ ಸವಾರರ ಪರದಾಟ.ನೂತನ ತಾಲೂಕಿನ ಸೋಮನಾಥಪುರ ಹಾಗೂ ನಾರೇಮದ್ದೆಪಲ್ಲಿ ಎರಡು ಗ್ರಾಂಪಂ ವ್ಯಾಪ್ತಿಗೆ ಒಳಪಡುವ ಬೆಸ್ತಲಪಲ್ಲಿಯಿಂದ ರಾಚವಾರಪಲ್ಲಿಗೆ ಸಂಪರ್ಕ ಕಲ್ಪಿಸುವ ಕುರುಬರಹಳ್ಳಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಗಳ ರಸ್ತೆಯ ಸ್ಥಿತಿ ಇದು.
ಈ ಗ್ರಾಮಗಳಲ್ಲಿ 350 ಕುಟುಂಬಗಳಿವೆ. 1500ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ರಾಚವಾರಪಲ್ಲಿ ಗ್ರಾಮದ ಹೊರವಲಯದ ಮಂಗಳಮಡುಗವಾರಪಲ್ಲಿ ಕ್ರಾಸ್ ನಿಂದ ಬೆಸ್ತಲಪಲ್ಲಿ ಕುರುಬರಹಳ್ಳಿ ಕ್ರಾಸ್ ನ ಆಂಜನೇಯ ಸ್ವಾಮಿಯ ವಿಗ್ರಹದವರೆಗೂ ಸುಮಾರು 5. ಕಿಮೀ ಉದ್ದದ ರಸ್ತೆ ಕಾಮಗಾರಿಯು 2022ರಲ್ಲೇ ಆರಂಭವಾದರೂ, ಈವರೆಗೆ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಜಲ್ಲಿ ತಂದು ಸುರಿಯಲಾಗಿದೆ. ಇದಿಷ್ಟೇ ಜಿಲ್ಲಾ ಪಂಚಾಯತಿಯ ಸಾಧನೆಯಾಗಿದೆ.ಕುಂಟುತ್ತ ಸಾಗಿರುವ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿ ಹೆಜ್ಜೆಗೂ ಸಿಗುವ ಗುಂಡಿಗಳು ವಾಹನ ಸವಾರರನ್ನು ಕಾಡುತ್ತಿವೆ. ಉಬ್ಬು-ತಗ್ಗುಗಳ ನಡುವೆ ವಾಹನ ಚಲಾಯಿಸಲು ಸಾಹಸ ಮಾಡಬೇಕಿದೆ.
ಈ ಮಾರ್ಗದಲ್ಲಿ ಪ್ರತಿನಿತ್ಯ ಶಾಲಾ ವಾಹನ ಸೇರಿ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಹೊಸದಾಗಿ ಡಾಂಬರು ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಸುಮಾರಾಗಿ ಇರುವ ರಸ್ತೆಯನ್ನು ಜೆಸಿಬಿ ಯಂತ್ರಗಳ ಮೂಲಕ ಕಿತ್ತು ರಸ್ತೆಗೆ ಡಾಂಬರು ಹಾಕದೇ ಹಾಗೇ ಬಿಟ್ಟಿದ್ದಾರೆ.ಇದರಿಂದ ಪ್ರತಿನಿತ್ಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ದುರಸ್ತಿ ಕಾಣದ ರಸ್ತೆಯಿಂದಾಗಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ರಸ್ತೆಗೆ ಅಲ್ಲಲ್ಲಿ ಕಾಟಾಚಾರಕ್ಕೆ ಜಲ್ಲಿ ಸುರಿದಿದ್ದರು. ವಾಹನಗಳ ಓಡಾಟದಿಂದ ಜಲ್ಲಿ ಕಲ್ಲುಗಳು ರಸ್ತೆಯೆಲ್ಲಾ ಹರಡಿಕೊಂಡಿವೆ. ವಾಹನ ಸಂಚಾರಕ್ಕೆ ಸಾಧ್ಯವೇ ಆಗದಷ್ಟು ತೊಂದರೆಯಾಗಿದೆ. ವೃದ್ಧರು ಮತ್ತು ಮಕ್ಕಳು ಪರದಾಡಬೇಕಾದ ಸ್ಥಿತಿ ಇದೆ. ಈ ರಸ್ತೆಯುದ್ದಕ್ಕೂ ಶಾಲಾ–ಕಾಲೇಜುಗಳಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಪ್ರಯಾಸಪಡಬೇಕಾದ ಸ್ಥಿತಿ ಇದೆ ಎಂದು ಆರೋಪಿಸಿದರು.ರಸ್ತೆಯಲ್ಲಿ ಸುರಿದಿರುವ ಜಲ್ಲಿ ಕಲ್ಲು ಮೇಲೆದ್ದಿದ್ದು ವಾಹನಗಳ ಟೈರ್‌ಗಳು ರಸ್ತೆ ಮಧ್ಯದಲ್ಲೇ ಪಂಕ್ಚರ್ ಆಗಿ ನಿಲ್ಲುವಂತಾಗಿದೆ. ಗ್ರಾಮದಲ್ಲಿ ವಾಹನಗಳು ರಭಸದಿಂದ ಸಂಚರಿಸುವಾಗ ಕಲ್ಲುಗಳು ಅಕ್ಕ-ಪಕ್ಕದ ಮನೆಗಳ ಮೇಲೆ, ಪಾದಚಾರಿಗಳಿಗೂ ಬೀಳುತ್ತಿವೆ. ಸ್ಥಳೀಯರಿಗೆ ನರಕವೇ ಕಣ್ಮುಂದೆ ಬಂದಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ:ರಾಚವಾರಪಲ್ಲಿಯಿಂದ ಚಿನ್ನಗಾನಪಲ್ಲಿವರೆಗೂ ಅಲ್ಪಮಟ್ಟಿಗೆ ಕಾಮಗಾರಿ ಮುಗಿದಿದೆ. ಅಲ್ಲಿಂದ ಬೆಸ್ತಲಪಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವ ಗೋಜಿಗೆ ಮುಂದಾಗಿಲ್ಲ.
ಪರದಾಟಕ್ಕಿಲ್ಲ ಮುಕ್ತಿ:ರಸ್ತೆಯನ್ನು ಕಿತ್ತು ಮರು ಡಾಂಬರೀಕರಣ ಮಾಡುವ ಉದ್ದೇಶದಿಂದ ರಸ್ತೆಗೆ ಜಲ್ಲಿ ಸುರಿದಿದ್ದರಿಂದ ಸ್ಥಳೀಯರು ಕಳೆದ ಮೂರು ವರ್ಷಗಳಿಂದಲೂ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗುತ್ತಿದ್ದು, ಚಿಕ್ಕ ಹೊಂಡಗಳಾಗುತ್ತಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ,ಗುಂಡಿಯಲ್ಲಿ ಇಳಿಯುವಾಗ ಗಾಡಿಗಳು ಸ್ಕಿಡ್ ಆಗಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.
‘ಹಿಂದೆ ಇದ್ದ ರಸ್ತೆಯನ್ನು ಉತ್ತಮ ದರ್ಜೆಯಲ್ಲಿ ನಿರ್ಮಾಣ ಮಾಡುವುದಾಗಿ ಕಿತ್ತುಹಾಕಿದ ಅಧಿಕಾರಿಗಳು, ವರ್ಷಗಳೇ ಕಳೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಸಂಚರಿಸುವುದು ಕಷ್ಟಕರವಾಗಿದೆ. ಗರ್ಭಿಣಿಯರು ಮತ್ತು ರೋಗಿಗಳನ್ನು ಕರೆದೊಯ್ಯಲು ತೀವ್ರ ತೊಂದರೆಯಾಗುತ್ತಿದೆ.’- ಸುಧಾಕರ್, ಆಟೊರಿಕ್ಷಾ ಚಾಲಕ
‘ಮೂಲಸೌಕರ್ಯಗಳಲ್ಲಿ ಒಂದಾದ ಸುಗಮ ರಸ್ತೆ ಸಂಚಾರ ವ್ಯವಸ್ಥೆ ಹಲವು ವರ್ಷಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ಶಾಸಕರ ಆಪ್ತರು ಈ ಗ್ರಾಮದಲ್ಲಿ ಇದ್ದರೂ ಕನಿಷ್ಠ ಗ್ರಾಮಕ್ಕೆ ರಸ್ತೆ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ,ಇದು ಈ ಗ್ರಾಮಗಳ ದುಸ್ಥಿತಿ.’• ಹೆಸರು ಹೇಳಲು ಇಚ್ಛಿಸದ ಯುವಕ