ಮನೆಯ ಒಳಗಡೆ ಸ್ವಚ್ಛತೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಅಷ್ಟೇ ಮಹತ್ವ ಮನೆಯ ಹೊರಭಾಗದಲ್ಲಿಯೂ ನೀಡಬೇಕು.

ಬಳ್ಳಾರಿ: ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಲ್‌ಬಜಾರ್ ಸಹಕಾರದೊಂದಿಗೆ ನಗರದ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ಹರಡುವ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನೆಯ ಒಳಗಡೆ ಸ್ವಚ್ಛತೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಅಷ್ಟೇ ಮಹತ್ವ ಮನೆಯ ಹೊರಭಾಗದಲ್ಲಿಯೂ ನೀಡಬೇಕು. ಇದರಿಂದ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು.

ಅನಗತ್ಯವಾಗಿ ಮಳೆ ನೀರು ನಿಲ್ಲುವ ಬೀಸಾಡಿದ ಟೈರ್, ತಗಡಿನ್ ಟಿನ್, ಪ್ಲಾಸ್ಟಿಕ್ ಕಫ್ ಮತ್ತು ಹೂವಿನ ಕುಂಡಲು, ಫ್ರಿಜ್ ಹಿಂಭಾಗದಲ್ಲಿ 7 ದಿನಗಳಿಗಿಂತ ಹೆಚ್ಚು ಸತತವಾಗಿ ನೀರು ನಿಲ್ಲದಂತೆ ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಕೈ ಜೋಡಿಸಿದಲ್ಲಿ ಮಾತ್ರ ಇದು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ವಿ.ಕೆ. ಮಾತನಾಡಿ, ರಾಜ್ಯ ಸರ್ಕಾರ ಡೆಂಘೀ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದ್ದು, ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷ್ಯ ವಹಿಸಿದರೆ ₹200ದಿಂದ ₹2000 ವರೆಗೆ ದಂಡ ವಿಧಿಸುವ ಕಾನೂನು ಅನುಷ್ಟಾನ ಮಾಡಿದೆ. ಆದರೆ ಕಾನೂನುನಿಂದ ಮಾತ್ರ ಸೊಳ್ಳೆ ನಿಯಂತ್ರಣ ಮಾಡದೇ ಪ್ರತಿಯೊಬ್ಬರ ಸಹಭಾಗಿತ್ವದೊಂದಿಗೆ ಸೊಳ್ಳೆಗಳ ನಿಯಂತ್ರಣ ಅವಶ್ಯಕತೆಯಿದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ಅಬ್ದುಲ್ಲಾ ಮಾತನಾಡಿದರು. ಸಹಾಯಕ ಕೀಟಶಾಸ್ತ್ರಜ್ಞ ಡಾ.ಮುಜಮಿಲ್ ಫಿರ್‌ದೋಸ್, ಡಾ.ನವೀದ್ ಆಲಂ, ನಂದಿನಿ, ಜಿಲ್ಲಾ ಸಲಹೆಗಾರ ಪ್ರತಾಪ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್ ಸೇರಿದಂತೆ ಪ್ರಾಥಮಿಕ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.