ಖಾಸಗಿ ಶಾಲಾ-ಕಾಲೇಜುಗಳ ಡೊನೇಷನ್ ಹಾವಳಿ ತಡೆಯಿರಿ

| Published : May 21 2024, 12:31 AM IST

ಖಾಸಗಿ ಶಾಲಾ-ಕಾಲೇಜುಗಳ ಡೊನೇಷನ್ ಹಾವಳಿ ತಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಡೊನೇಷನ್ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ವಿಧ್ಯಾರ್ಥಿ, ಪಾಲಕರಿಗೆ ಅನುಕೂಲವಾಗಲು ಹೆಲ್ಪ್ ಲೈನ್ ಆರಂಭಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಈ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಪ್ರಮುಖರು ಸೋಮವಾರ ಬೀದರ್‌ನಲ್ಲಿ ಸಿಎಂಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾಗಿ ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಡೊನೇಷನ್ ಹಾವಳಿ ಎದುರಿಸಬೇಕಾಗಿದೆ. ಇದರಿಂದ ಎಷ್ಟೋ ಜನ ವಿದ್ಯಾರ್ಥಿಗಳ ಶಿಕ್ಷಣದ ಕನಸು ಕಮರುತ್ತಿದೆ.

ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡಬೇಕಾದ ವಿದ್ಯಾಸಂಸ್ಥೆಗಳು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿವೆ. ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳದೆ ಮೌನವಾಗಿದ್ದು ಖಂಡನೀಯ.

ಡೊನೇಷನ್ ಹಾವಳಿ ತಡೆಗಟ್ಟಲು ಸರ್ಕಾರದ ಸುತ್ತೋಲೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಶುಲ್ಕ ನಿಗದಿ ಮಾಡಿಕೊಳ್ಳುತ್ತಿವೆ. ಡೊನೇಷನ್ ಹಾವಳಿ ತಡೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲೇಬೇಕು. ಖಾಸಗಿ ಕಾಲೇಜುಗಳು ರೋಸ್ಟರ್ ಪದ್ಧತಿ ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಬೇಕು. ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಿ ಮೂಲಭೂತ ಸೌಲಭ್ಯ ನೀಡಬೇಕು.

ಶಿಕ್ಷಣ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹಲವು ಕಾಯ್ದೆ ಜಾರಿಗೆ ತಂದಿದೆ. ಇದರ ಪ್ರಕಾರ ಅನುದಾನಿತ ಸಂಸ್ಥೆಗಳು, ಅನುದಾನರಹಿತ ಸಂಸ್ಥೆಗಳು ಅಭಿವೃದ್ಧಿ ಶುಲ್ಕವನ್ನು ಸರ್ಕಾರ ನಿಗದಿತ ಶುಲ್ಕ ಮಾತ್ರ ಸಂಗ್ರಹಿಸಲು ಅವಕಾಶವಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಸಮಿತಿ ರಚಿಸಬೇಕು. ಕಾಲೇಜುಗಳ ಮಕ್ಕಳ ಸಂಖ್ಯೆ ಪ್ರಕಾರ ಸಂಸ್ಥೆ ಆದಾಯ ಕ್ರೂಢಿಕರಿಸಿ ಇಲಾಖೆಯೇ ಶುಲ್ಕ ನಿಗದಿ ಮಾಡಬೇಕು. ಸಂಘಟನೆಗಳ, ಪಾಲಕರ ಜಂಟಿ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಚರ್ಚಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ

ಸರ್ಕಾರ ವಿಧ್ಯಾರ್ಥಿ ಹಾಗೂ ಪಾಲಕರಿಗೆ ಡೊನೇಷನ್ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಉಚಿತ ಸಹಾಯವಾಣಿ ಆರಂಭಿಸಬೇಕು. ಕನಿಷ್ಠ ಪಕ್ಷ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತುಂಬಾ ಸಹಾಯಕವಾಗಬಹುದು.

ಮುಂದಿನ ದಿನಗಳಲ್ಲಿ ವಿಳಂಬ ನೀತಿ ಅನುಸರಿಸಿದರೆ ದಲಿತ ವಿದ್ಯಾರ್ಥಿ ಪರಿಷತ್ ಅಲ್ಲದೇ ವಿದ್ಯಾರ್ಥಿ, ಪಾಲಕರೊಂದಿಗೆ ಜೊತೆಗೂಡಿ ಡೊನೇಷನ್ ವಸೂಲಿ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾಲೆ, ಜಿಲ್ಲಾಧ್ಯಕ್ಷ, ವಿಶಾಲ ಕುದರೆ,ಸಂಗಪ್ರಕಾಶ, ಅಮರನಾಥ ಹುಡಗೆ, ರೋಹನ ಆರ್ಯ ಇದ್ದರು.