ಸಾರಾಂಶ
ವಿಜಯಪುರ : ರೈತರ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಕಳಪೆ ಮಾರಾಟ ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಜಿಲ್ಲೆಯ ಸಣ್ಣ ಸಣ್ಣ ಹೊಟೆಲ, ಕಿರಾಣಿ ಅಂಗಡಿ, ಝರಾಕ್ಸ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಿದ್ದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಅವರ ಪರವಾನಿಗೆಯನ್ನು ಶಾಶ್ವತವಾಗಿ ರದ್ದು ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಾಗೃತಿದಳ ಹೆಚ್ಚಿಗೆ ಮಾಡಿ, ಪ್ರತಿ ತಾಲೂಕಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಇಲಾಖೆಯ ಪರವಾನಿಗೆ ಪಡೆಯದೇ (ಪಿ.ಸಿ) ಅನಧಿಕೃತ ಮತ್ತು ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಾಧ್ಯಕ್ಷ ಮಹದೇವಪ್ಪ ತೇಲಿ ಮಾತನಾಡಿ, ರೈತಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡುವ ತಾಡಪಾಲ, ಸ್ಪಿಂಕಲರ್ ಪೈಪ್, ಸ್ಪ್ರೇ ಪಂಪ್‌ಗಳು ಅಷ್ಟು ಹೇಳಿಕೊಳ್ಳುವಂತಹ ಗುಣಮಟ್ಟದಿಂದ ಕೂಡಿಲ್ಲ. ಅಧಿಕಾರಿಗಳಿಗೆ ಕೇಳಿದರೆ ನಮಗೆ ಗೊತ್ತಿಲ್ಲ, ಮೇಲಿನಿಂದ ಹೀಗೆ ಬಂದಿವೆ ನಾವೇನು ಮಾಡುವುದು ಎನ್ನುತ್ತಿದ್ದಾರೆ. ಆದ್ದರಿಂದ ಒಟ್ಟಾರೆಯಾಗಿ ರೈತರಿಗೆ ಅನ್ಯಾಯವಾಗದ ಹಾಗೆ ಸರಿಯಾಗಿ ಗುಣಮಟ್ಟದ ವಸ್ತುಗಳನ್ನು ಕೊಡಿ, ಯಾಕೆಂದರೆ ಒಮ್ಮೆ ಸರಕಾರದ ಯೋಜನೆ ಪಡೆದರೆ ೭ ವರ್ಷ ಮತ್ತೆ ತೆಗೆದುಕೊಳ್ಳಲು ಬರುವುದಿಲ್ಲ ಅಂತಾರೆ ಎಂದು ದೂರಿದರು.
ಈ ವೇಳೆ ಉಪಾಧ್ಯಕ್ಷ ಪ್ರಕಾಶ ತೇಲಿ, ಆಹೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಾಣಗೇರ, ರಾಮಸಿಂಗ ರಜಪೂತ, ಬಸವರಾಜ ಹಡಪದ, ಅಶೋಕ ಕನ್ನೂರ, ರಾಜಾರಾಮಸಿಂಗ ಕೊಳೂರ, ಬಸವರಾಜ ಗುದಳೆ, ರವಿ ಗೆರಡೆ, ಶ್ರೀಶೈಲ ಮಸೂತಿ, ರಾಜು ಕೇರೂರ, ಬಸವರಾಜ ಮಸೂತಿ, ರಾಜಾರಾಮಸಿಂಗ ಡೊಣೂರ, ಹಣಮಂತ ಶೆಗಣೂಶಿ, ಪರಸು ಚಿಕ್ಕಲಕಿ, ಬಸವರಾಜ ಕಲ್ಬುರ್ಗಿ, ಮಲುಕು ಅಕ್ಕಿಹುಗ್ಗಿ, ಮಲ್ಲನಗೌಡ ಬಿರಾದಾರ, ಸೋಮಯ್ಯ ದೊಡಮನಿ, ಮಹಾಂತೇಶ ಹತ್ತರಕಿ, ಭೀಮು ಚಿಮ್ಮಲಗಿ, ಮಹಾಂತೇಶ ಗೆರಡೆ ಸೇರಿದಂತೆ ಮುಂತಾದವರು ಇದ್ದರು.