ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪ್ರತಿಯೊಬ್ಬರೂ ಗ್ಯಾಸ್ ಸಿಲಿಂಡರ್ ಬಳಸುವ ಮೂಲಕ ಸಂಪೂರ್ಣ ಕಟ್ಟಿಗೆ ಒಲೆ ಬಳಕೆ ತಡೆಗಟ್ಟಿ ಪ್ರಕೃತಿಯ ವಿರುದ್ಧದ ದಬ್ಬಾಳಿಕೆಯನ್ನು ನಿಯಂತ್ರಿಸಿ ಸಮತೋಲನವನ್ನು ಕಾಪಾಡುವಂತೆ ಇಲ್ಲಿನ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.ಎಚ್.ಪಿ.ಗ್ಯಾಸ್ ಕಂಪನಿಯ 50ನೇ ವರ್ಷಾಚರಣೆ ಅಂಗವಾಗಿ ಪಟ್ಟಣದ ಶಿರಾಳಕೊಪ್ಪ ವೃತ್ತದ ಬಳಿಯಲ್ಲಿನ ಸೈನಿಕ ಎಚ್.ಪಿ ಗ್ಯಾಸ್ ಏಜೆನ್ಸಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಸಿ ನೆಡುವ ಜತೆಗೆ ಸಾರ್ವಜನಿಕರಿಗೆ ಸಸಿ ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದ ಕಟ್ಟಿಗೆ ಒಲೆಯಿಂದ ಅಡುಗೆ ತಯಾರಿಸುವ ಪದ್ಧತಿ ಚಾಲ್ತಿಯಲ್ಲಿದ್ದು, ಇದೀಗ ಜನಸಂಖ್ಯಾ ಸ್ಫೋಟದಿಂದ ಕಟ್ಟಿಗೆಗಾಗಿ ಕಾಡು ಅರಣ್ಯ ಸಂಪತ್ತು ನಾಶದ ಮೂಲಕ ಪ್ರಕೃತಿ ವಿರುದ್ಧ ದಬ್ಬಾಳಿಕೆ ಹೆಚ್ಚಾಗಿದೆ. ಈ ದಿಸೆಯಲ್ಲಿ ಪ್ರಕೃತಿಯನ್ನು ಉಳಿಸಿ ಪರಿಸರ ಸಮತೋಲನ ಕಾಪಾಡಲು ಸರ್ಕಾರ ಗ್ಯಾಸ್ ಬಳಕೆ ಯನ್ನು ಉತ್ತೇಜಿಸಲು ಗ್ಯಾಸ್ ಸಿಲಿಂಡರ್, ಸ್ಟೌವ್ ಉಚಿತವಾಗಿ ನೀಡುತ್ತಿದ್ದು, ಅರ್ಹರು ಸೌಲಭ್ಯ ಸದ್ಬಳಕೆ ಮೂಲಕ ಪ್ರಕೃತಿ ರಕ್ಷಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.ಮುಖ್ಯ ಅತಿಥಿ ಪೊಲೀಸ್ ವೃತ್ತ ನಿರೀಕ್ಷಕ ರುದ್ರೇಶ್ ಮಾತನಾಡಿ, ದೇಶದ ಪ್ರಥಮ ಗ್ಯಾಸ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಎಚ್.ಪಿ.ಸಿ.ಎಲ್ ಇದೀಗ 50 ವರ್ಷ ಪೂರೈಸುವ ಮೂಲಕ ದೇಶದ ಅಭಿವೃದ್ಧಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ ಗ್ರಾಹಕರ ಹಿತಾಸಕ್ತಿಗೆ ಪೂರಕವಾಗಿ ಕಂಪನಿ ಜತೆಗೆ ಏಜೆನ್ಸಿ ಮಾಲೀಕರು ಸಹಕರಿಸಿ ಉತ್ತಮ ಸೇವೆ ಮೂಲಕ ಗುರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್ ಮಾತನಾಡಿ, 50 ನೇ ವರ್ಷದ ಸಂಭ್ರಮಾಚರಣೆಯನ್ನು ಸಸಿ ನೆಡುವ ಜತೆಗೆ ವಿತರಿಸಿ ಏಜೆನ್ಸಿ ಮಾಲೀಕರು ಪರಿಸರದ ಬಗ್ಗೆ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಪ್ರಯತ್ನ ಮಾದರಿಯಾಗಿದೆ ಎಂದರು.ಸೈನಿಕ ಎಚ್.ಪಿ ಗ್ಯಾಸ್ ಏಜೆನ್ಸಿ ಮಾಲೀಕ ನಿವೃತ್ತ ಯೋಧ ಬಸವರಾಜ್ ಕಪ್ಪನಹಳ್ಳಿ ಮಾತನಾಡಿ, ಸುದೀರ್ಘ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ಪರೋಕ್ಷ ವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ತಾಲೂಕಿನ ಹಿಂದುಳಿದ ಮರಾಠ ಕ್ಯಾಂಪ್ ಸಹಿತ ಹಲವು ಗ್ರಾಮದ ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸ್ಟೌವ್ ವಿತರಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡಿ ದ್ದಾಗಿ ಸ್ಮರಿಸಿಕೊಂಡರು.
ಕಾರ್ಯಕ್ರಮದ ಸವಿನೆನಪಿಗಾಗಿ ಕಚೇರಿ ಆವರಣದಲ್ಲಿ ಸಸಿ ನೆಡುವ ಜತೆಗೆ ಸಾರ್ವಜನಿಕರಿಗೆ ಸಸಿ ವಿತರಿಸಲಾಯಿತು. ಈ ಸಂದರ್ಬದಲ್ಲಿ ಪುರಸಭಾ ಸದಸ್ಯ ರೇಣುಕಸ್ವಾಮಿ, ಅಂಬಾರಗೊಪ್ಪ ಗ್ರಾ.ಪಂ ಸದಸ್ಯ ವಿಜಯನಾಯ್ಕ, ವಿಜಯಮ್ಮ, ಸುಜಾತ, ಶಿವಕುಮಾರ್, ಮೋಹನ್ ಮತ್ತಿತರಿದ್ದರು.