ಸಾರಾಂಶ
ರೈತರನ್ನು ಸಂಘಟಿಸುವ ಜತೆಗೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ರೈತರ ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವುದು ರೈತ ಉತ್ಪಾದಕ ಸಂಸ್ಥೆಗಳ ಉದ್ದೇಶವಾಗಿದೆ.
ಕುಮಟಾ:
ರೈತರನ್ನು ಸಂಘಟಿಸುವ ಜತೆಗೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ರೈತರ ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವುದು ರೈತ ಉತ್ಪಾದಕ ಸಂಸ್ಥೆಗಳ ಉದ್ದೇಶವಾಗಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಎದುರು ಕೂಜಳ್ಳಿಯ ‘ಕಣಜ’ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯನ್ನೇ ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿರುವ ಪ್ರದೇಶ ನಮ್ಮದಾಗಿದೆ. ಇಲ್ಲಿ ಆಹಾರ ಬೆಳೆಗಳ ಜತೆಗೆ ಗಣನೀಯ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ರೈತರು ತಾವು ಉತ್ಪಾದಿಸಿದ ಬೆಳೆಗಳಿಗೆ ಯೋಗ್ಯ ಬೆಲೆ ಪಡೆಯುವುದು ಅತಿಮುಖ್ಯ. ರೈತರಿಗೆ ನೆರವಾಗುವ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳು ರೈತರನ್ನು ಸಂಘಟಿತರಾಗಿಸುವುದಲ್ಲದೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಬೆಳೆಗಳಿಗೆ ನ್ಯಾಯಯುತ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಿದೆ. ಕೃಷಿ ಚಟುವಟಿಕೆಗೆ ಪೂರಕವಾದ ಮಾಹಿತಿ-ಮಾರ್ಗದರ್ಶನ ಒದಗಿಸುವ ಕಾರ್ಯವನ್ನು ಕೂಡಾ ಈ ಕೇಂದ್ರಗಳು ಮಾಡಬೇಕು ಎಂದರು.ಕಣಜ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವಿನಾಯಕ ವಿ. ಭಟ್ಟ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ನಾಯ್ಕ, ಜಿಲ್ಲಾ ಸಂಘಟನಾ ಅಧಿಕಾರಿ ವಿನಾಯಕ ಹೆಗಡೆ ಕಾಜಿಮನೆ, ಗಣಪತಿ ಶಂಕರ ಭಟ್ಟ ಅಬ್ಬಿ, ಕಣಜ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ನಾಗರಾಜ ಹೆಗಡೆ, ರಾಧಾಕೃಷ್ಣ ಗೌಡ, ಮಧು ಹೆಗಡೆ, ಪ್ರದೀಪ ಹೆಗಡೆ, ತಿಮ್ಮಪ್ಪ ಮುಕ್ರಿ ಇದ್ದರು.