ಬೆಲೆ ಕುಸಿತ 1 ರು.ಗೆ ಕುಸಿತ : ರಸ್ತೆಗೆ ಈರುಳ್ಳಿ ಸುರಿದು ರೈತರ ಆಕ್ರೋಶ

| N/A | Published : Oct 26 2025, 02:00 AM IST

Onion Price Drop
ಬೆಲೆ ಕುಸಿತ 1 ರು.ಗೆ ಕುಸಿತ : ರಸ್ತೆಗೆ ಈರುಳ್ಳಿ ಸುರಿದು ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಅತ್ತ ಸರ್ಕಾರ ಪರಿಹಾರವನ್ನೂ ಕೊಡುತ್ತಿಲ್ಲ. ಇತ್ತ ಅದರ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿಲ್ಲ. ಇದೀಗ ಈರುಳ್ಳಿಯಾದರೂ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಕುಸಿತವಾಗುತ್ತಿರುವುದು ಕಂಗೆಡಿಸಿದೆ.

ಹುಬ್ಬಳ್ಳಿ: ಈರುಳ್ಳಿ ಬೆಲೆ ಕುಸಿತ ಖಂಡಿಸಿ ಇಲ್ಲಿನ ಅಮರಗೋಳ ಎಪಿಎಂಸಿ ಕಚೇರಿ ಎದುರಿಗೆ ಈರುಳ್ಳಿ ಸುರಿದು ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ಎಪಿಎಂಸಿಗೆ ಆಗಮಿಸಿದ ನೂರಾರು ರೈತರು, ಈರುಳ್ಳಿ ಬೆಲೆ ಕುಸಿತ ಕಂಡಿದ್ದಕ್ಕೆ ಸರ್ಕಾರ ಹಾಗೂ ವರ್ತಕರ ವಿರುದ್ಧ ಘೋಷಣೆ ಕೂಗಿದರು. ಎಪಿಎಂಸಿ ಕಾರ್ಯದರ್ಶಿ ಕಚೇರಿ ಮುಂಭಾಗದಲ್ಲಿ ಈರುಳ್ಳಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ನೀಡಿ:

ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಅತ್ತ ಸರ್ಕಾರ ಪರಿಹಾರವನ್ನೂ ಕೊಡುತ್ತಿಲ್ಲ. ಇತ್ತ ಅದರ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿಲ್ಲ. ಇದೀಗ ಈರುಳ್ಳಿಯಾದರೂ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಕುಸಿತವಾಗುತ್ತಿರುವುದು ಕಂಗೆಡಿಸಿದೆ. ಕೂಡಲೇ ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಈರುಳ್ಳಿಯನ್ನು ಸರ್ಕಾರವೇ ಖರೀದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜಕಾರಣಿಗಳು ಚುನಾವಣೆ ಸಮೀಪಿಸುತ್ತಿದ್ದಾಗ ನಾವು ರೈತರೊಂದಿಗೆ ಇದ್ದೇವೆ ಎಂದು ಘೋಷಿಸುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳ ಮುಖವೂ ಕಾಣುವುದಿಲ್ಲ. ಇಂದು ನಾವು ಸಾಂಕೇತಿಕವಾಗಿ ಹೋರಾಟ ಮಾಡಿದ್ದೇವೆ. ಸೋಮವಾರದೊಳಗೆ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ಹುಬ್ಬಳ್ಳಿ-ಧಾರವಾಡ ರಸ್ತೆ, ಎಪಿಎಂಸಿ ಬಂದ್ ಮಾಡಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಈಗಾಗಲೇ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ್ದಾರೆ. ಆ ಬೆಳೆಗಳಿಗೆ ಪರಿಹಾರ ನೀಡುವುದಾಗಿ ಹೇಳಿದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈ ವರೆಗೂ ಹೆಸರು ಖರೀದಿ ಕೇಂದ್ರವನ್ನೂ ಪ್ರಾರಂಭಿಸಿಲ್ಲ. ಇದೀಗ ಈರುಳ್ಳಿ ಬೆಳೆ ವಿಷಯದಲ್ಲೂ ಇದೇ ರೀತಿ ಆಗುತ್ತಿದೆ ಎಂದು ಕಿಡಿಕಾರಿದರು.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ. ಆದರೆ, ಬೆಳೆ ಬಂದ ಬಳಿಕ ಬೇಕಾಬಿಟ್ಟಿಯಾಗಿ ಬೆಲೆ ನಿಗದಿ ಮಾಡಲಾಗುತ್ತಿದೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾನೆ. ಇಷ್ಟಾದರೂ ಸಹ ಸರ್ಕಾರ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ವರ್ತಕರ ಮೇಲೆ ಸರ್ಕಾರದ ಹಿಡಿತವಿಲ್ಲ. ಹೀಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ ಪರಿಹಾರ ನೀಡುವ ಬದಲು ರೈತರ ಬದುಕಿದ್ದಾಗ ಕಣ್ಣು ತೆರೆದು ನೋಡಬೇಕು ಎಂದರು.

ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಾದ ರಾಜು ಕರಮಡಿ, ಸಿದ್ದು ಮಲ್ಹಾರಿ, ಶಿವಪ್ಪ ತಿರಕಪ್ಪನವರ, ಅಶೋಕ ಚಿಲ್ಲನ್ನವರ, ಮಂಜುನಾಥ ಮಲ್ಹಾರಿ, ಬಸವರಾಜ ಬೈಲಣ್ಣವರ, ಮಲ್ಲಿಕಾರ್ಜುನ ಅಣ್ಣಿಗೇರಿ, ಸಿದ್ದಣ್ಣ ನಿಗದಿ, ಶಿವಾನಂದ ಹೂಗಾರ, ಫಕ್ಕಣ್ಣ ಯಡ್ರಾವಿ, ದ್ಯಾಮಣ್ಣ ಹಳಗತ್ತಿ, ಸಿದ್ದು ಮಲ್ಹಾರಿ, ಚನ್ನಪ್ಪ ಕೊಣ್ಣೂರ, ಶಿವಾನಂದ ನವಲೂರ, ಶೇಖಪ್ಪ ರೂಗಿ ಸೇರಿದಂತೆ ಹಲವರಿದ್ದರು.

ಈರುಳ್ಳಿ ಬೆಲೆ ಕುಸಿತ ಎಷ್ಟು?:

ಹುಬ್ಬಳ್ಳಿ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ (ಸ್ಥಳೀಯ) ಕ್ವಿಂಟಲ್‌ಗೆ ಕನಿಷ್ಠ ₹ 100ರಿಂದ ಗರಿಷ್ಠ ₹ 1800ಗೆ ಮಾರಾಟವಾಗಿದೆ. ಪುಣೆ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ ₹ 1750ಗೆ ಮಾರಾಟವಾಗಿದೆ. ಈರುಳ್ಳಿ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಸಾಗುತ್ತಿದೆ. ಕಳೆದ 15 ದಿನಗಳಿಂದ ದರ ಕುಸಿತವಾಗಿದ್ದು ಇದಕ್ಕೆ ಸರ್ಕಾರ, ವರ್ತಕರೇ ಕಾರಣ. ಆದಕಾರಣ ಕನಿಷ್ಠ ₹ 5 ಸಾವಿರ ನಿಗದಿಪಡಿಸಿ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕೆಂಬುದು ರೈತರ ಒಕ್ಕೊರಲಿನ ಆಗ್ರಹವಾಗಿದೆ.

Read more Articles on