ದರ ಕುಸಿತ: ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ

| Published : Oct 26 2025, 02:00 AM IST

ಸಾರಾಂಶ

ಈರುಳ್ಳಿ ಬೆಲೆ ಕುಸಿತ ಖಂಡಿಸಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಕಚೇರಿ ಎದುರಿಗೆ ಶನಿವಾರ ಈರುಳ್ಳಿ ಸುರಿದು ರೈತರು ಪ್ರತಿಭಟನೆ ನಡೆಸಿದ್ದು, ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಈರುಳ್ಳಿ ಬೆಲೆ ಕುಸಿತ ಖಂಡಿಸಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಕಚೇರಿ ಎದುರಿಗೆ ಶನಿವಾರ ಈರುಳ್ಳಿ ಸುರಿದು ರೈತರು ಪ್ರತಿಭಟನೆ ನಡೆಸಿದ್ದು, ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕು ಆಗ್ರಹಿಸಿದ್ದಾರೆ.

ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ಎಪಿಎಂಸಿಗೆ ಆಗಮಿಸಿದ ನೂರಾರು ರೈತರು, ಎಪಿಎಂಸಿ ಕಾರ್ಯದರ್ಶಿ ಕಚೇರಿ ಮುಂಭಾಗದಲ್ಲಿ ಈರುಳ್ಳಿ ಸುರಿದು ಸರ್ಕಾರ ಹಾಗೂ ವರ್ತಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ (ಸ್ಥಳೀಯ) ಕ್ವಿಂಟಲ್‌ಗೆ ಕನಿಷ್ಠ ₹100 ರಿಂದ ಗರಿಷ್ಠ ₹1800 ದರಕ್ಕೆ ಮಾರಾಟವಾಗಿದೆ. ಪುಣೆ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ ₹1750ಗೆ ಮಾರಾಟವಾಗಿದೆ. ಈರುಳ್ಳಿ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಸಾಗುತ್ತಿದೆ.

ಒಂದೆಡೆ ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿದ್ದು, ಸರ್ಕಾರ ಪರಿಹಾರವನ್ನೂ ಕೊಡುತ್ತಿಲ್ಲ. ಇತ್ತ ಅದರ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿಲ್ಲ. ಇದೀಗ ಈರುಳ್ಳಿಯಾದರೂ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದಾಗ ಬೆಲೆ ಕುಸಿತವಾಗಿದೆ. ಹಾಗಾಗಿ ಕೂಡಲೇ ಪ್ರತಿ ಕ್ವಿಂಟಲ್‌ಗೆ ₹5000 ಬೆಂಬಲ ಬೆಲೆ ನಿಗದಿಪಡಿಸಿ ಈರುಳ್ಳಿಯನ್ನು ಸರ್ಕಾರವೇ ಖರೀದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಂಬಲ ಬೆಲೆ ಘೋಷಣೆಗೆ ಅ.27ರ ಗಡುವು:

ರಾಜಕಾರಣಿಗಳು ಚುನಾವಣೆ ವೇಳೆ ನಾವು ರೈತರೊಂದಿಗೆ ಇದ್ದೇವೆ ಎಂದು ಘೋಷಿಸುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳ ಮುಖವೂ ಕಾಣುವುದಿಲ್ಲ. ಸದ್ಯ ನಾವು ಸಾಂಕೇತಿಕ ಹೋರಾಟ ಮಾಡಿದ್ದು, ಸೋಮವಾರದೊಳಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ಹುಬ್ಬಳ್ಳಿ-ಧಾರವಾಡ ರಸ್ತೆ, ಎಪಿಎಂಸಿ ಬಂದ್ ಮಾಡಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಈಗಾಗಲೇ ರೈತರು ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿದ್ದಾರೆ. ಆ ಬೆಳೆಗಳಿಗೆ ಪರಿಹಾರ ನೀಡುವುದಾಗಿ ಹೇಳಿದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇದೀಗ ಈರುಳ್ಳಿ ಬೆಳೆ ವಿಷಯದಲ್ಲೂ ಇದೇ ರೀತಿ ಆಗುತ್ತಿದೆ. 1 ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ ₹50,000 ಖರ್ಚಾಗುತ್ತದೆ. ಆದರೆ, ಬೆಳೆ ಬಂದ ಬಳಿಕ ಬೇಕಾಬಿಟ್ಟಿಯಾಗಿ ಬೆಲೆ ನಿಗದಿ ಮಾಡುತ್ತಿದ್ದು, ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸಹ ಸರ್ಕಾರ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಹೀಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ ಪರಿಹಾರ ನೀಡುವ ಬದಲು ರೈತರ ಬದುಕಿದ್ದಾಗ ಕಣ್ಣು ತೆರೆದು ನೋಡಬೇಕು ಎಂದು ಕಿಡಿಕಾರಿದರು.