ದರ ಕುಸಿತ: ದ್ರಾಕ್ಷಿಗೆ ಬೆಂಬಲ ಬೆಲೆ ನೀಡಲು ಆಗ್ರಹ

| Published : Jun 06 2024, 12:32 AM IST

ದರ ಕುಸಿತ: ದ್ರಾಕ್ಷಿಗೆ ಬೆಂಬಲ ಬೆಲೆ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದ್ರಾಕ್ಷಿ ಬೆಲೆ ತೀವ್ರ ಕುಸಿತದಿಂದಾಗಿ ರೈತರು ನಲುಗಿದ್ದು, ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆ ಪ್ರಾರಂಭವಾಗುತ್ತಿದ್ದಂತೆ ದಿಢೀರ್ ಬೆಲೆ ಕುಸಿತವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬರಗಾಲದಲ್ಲೂ ಕಷ್ಟ ಪಟ್ಟು ಬೆಳೆದ ದ್ರಾಕ್ಷಿಗೆ ಒಂದಡೆ ಬೆಲೆ ಕುಸಿತ ಹಾಗೂ ಕಟಾವಿಗೆ ಬಂದಿರುವ ಸಮಯದಲ್ಲಿ ಮಳೆ ಬರುತ್ತಿರುವುದರಿಂದ ದ್ರಾಕ್ಷಿ ಬೆಳೆ ಹಾಳಾಗತೊಡಗಿದೆ. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದ್ರಾಕ್ಷಿ ಬೆಲೆ ತೀವ್ರ ಕುಸಿತದಿಂದಾಗಿ ರೈತರು ನಲುಗಿದ್ದು, ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆ ಪ್ರಾರಂಭವಾಗುತ್ತಿದ್ದಂತೆ ದಿಢೀರ್ ಬೆಲೆ ಕುಸಿತವಾಗಿದೆ.

ದ್ರಾಕ್ಷಿ ಖರೀದಿಗೆ ಹಿಂದೇಟು

ಇದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೋದಷ್ಟು ಬೆಲೆ ಹೋಗಲಿ ತೋಟದಲ್ಲಿ ಸರಕು ಖಾಲಿಯಾದರೆ ಸಾಕು ಎನ್ನುವ ಸ್ಥಿತಿ ತಲುಪಿದ್ದಾರೆ. ಆದರೂ ದ್ರಾಕ್ಷಿ ಖರೀದಿಗೆ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹಾಗಾಗಿ ಕಾಡಿ ಬೇಡಿ ವ್ಯಾಪಾರಸ್ಥರ ಬೆನ್ನು ಬಿದ್ದರೆ ಸಾಲ ನೀಡುವುದಾದರೆ ಸರಕು ಖಾಲಿ ಮಾಡುವ ಭರವಸೆ ನೀಡುತ್ತಿದ್ದಾರೆ.ಮಳೆಯಿಂದ ಭಾರೀ ನಷ್ಟಕಳೆದ ವರ್ಷ ಇದೇ ಸೀಸನ್‍ನಲ್ಲಿ ದ್ರಾಕ್ಷಿ ಕೆ.ಜಿಗೆ 35 ರಿಂದ 40 ರು.ವರೆಗೆ ಇತ್ತು. ಈ ವರ್ಷ 15 ದಿನಗಳ ಹಿಂದೆ ಕೆಜಿಗೆ 30 ರು.ಗಳಿಗೆ ಮೇಲೆ ದ್ರಾಕ್ಷಿ ಮಾರಾಟವಾಗಿದೆ. ಮಳೆ ಬಿದ್ದ ಬಳಿಕ ಬೆಲೆ ದಿನಕ್ಕೆ ಬೆಲೆ ಕುಸಿಯುತ್ತಿದ್ದು, ಈಗ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10ರಿಂದ 12 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆ ಇದ್ದು, ಕಳೆದ ಹಲವು ದಿನಗಳಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹಣ್ಣಾದ ದ್ರಾಕ್ಷಿ ಕೊಳೆತು ಹೋಗುತ್ತಿದೆ, ಕೊಳೆತ ದ್ರಾಕ್ಷಿ ಹಣ್ಣನ್ನು ಗೊಂಚಲಿನಿಂದ ಬಿಡಿಸಿ ಬಿಸಾಡಬೇಕು ಇಲ್ಲದಿದ್ದರೆ ಗೊಂಚಲು ಸಂಪೂರ್ಣ ನಾಶ ಗೊಳಿಸುತ್ತದೆ, ರೈತರಿಗೆ ಇದು ಹೊರೆಯಾಗಿ ಪರಿಣಮಿಸಿದೆ.

ಓರಿಸ್ಸಾ, ಬಿಹಾರ, ಮಹಾರಾಷ್ಟ್ರದ ಸೇರಿದಂತೆ ದೇಶದ ವಿವಿಧೆಡೆಗೆ ಜಿಲ್ಲೆಯಿಂದ ದ್ರಾಕ್ಷಿ ರಫ್ತು ಆಗಲಿದೆ. ಈಗ ಆ ಭಾಗದಲ್ಲಿ ಶೀತಲೀಕರಣ ಘಟಕಗಳಲ್ಲಿನ ದ್ರಾಕ್ಷಿಯನ್ನು ಮಾರುಕಟ್ಟೆ ಬಿಟ್ಟಿರುವ ಪರಿಣಾಮ ಆ ರಾಜ್ಯಗಳಲ್ಲಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗಿದೆ. ಹೆಚ್ಚು ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ, ದ್ರಾಕ್ಷಿ ಆನ್‌ಲೈನ್‌ ಟ್ರೇಡಿಂಗ್‌ ವಹಿವಾಟಿಗೆ ರೈತರು ಆಗ್ರಹಿಸಿದ್ದಾರೆ. ಹೆಸರಿಗಷ್ಟೇ ದ್ರಾಕ್ಷಿ ಮಂಡಳಿ ಇದೆ. ದರ ಕುಸಿದಾಗ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ದ್ರಾಕ್ಷಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ದ್ರಾಕ್ಷಿ ಬೆಳೆಗಾರ ರಾಮಣ್ಣ ಒತ್ತಾಯಿಸಿದ್ದಾರೆ.