ಕೃಷಿಗೆ ಅಗತ್ಯವಾದ ಬೀಜ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯ ಜತೆಗೆ ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಳವಾಗಿರುವುದರಿಂದ ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ
ಏಕನಾಥ ಮೆದಿಕೇರಿ ಹನುಮಸಾಗರ
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಬಿಸಿ ಇದೀಗ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಾಲ ಮಾಡುವ ದುಸ್ಥಿತಿಗೆ ತಲುಪಿದ್ದಾರೆ.ಡೀಸೆಲ್, ಪೆಟ್ರೋಲ್ ದರ ನಿರಂತರ ಏರಿಕೆಯಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಹೆಚ್ಚಳವಾಗಿದ್ದು, ಮುಂಗಾರು ಕೃಷಿ ಆರಂಭದ ಹೊತ್ತಿನಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಸದ್ಯ ಮುಂಗಾರು ಆರಂಭವಾಗಿದ್ದು, ರೈತರು ಹೊಲಗಳ ಬಿತ್ತನೆಗೆ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕೃಷಿಗೆ ಅಗತ್ಯವಾದ ಬೀಜ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯ ಜತೆಗೆ ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಳವಾಗಿರುವುದರಿಂದ ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಸಹಕಾರಿ ಸಂಘ, ಬ್ಯಾಂಕ್ ಹಾಗೂ ಖಾಸಗಿ ಸಾಲದಾತರ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.ಡೀಸೆಲ್ ಹೊರೆ: ಆಧುನಿಕ ಕೃಷಿ ಪದ್ಧತಿಯಲ್ಲಿ ಟ್ರ್ಯಾಕ್ಟರ್, ರೂಟರ್, ಬಿತ್ತನೆ ಯಂತ್ರ, ಕಟಾವು ಯಂತ್ರ, ಜೆಸಿಬಿ ಸೇರಿದಂತೆ ಹಲವು ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಇವುಗಳೆಲ್ಲ ಡೀಸೆಲ್ ಆಧಾರಿತವಾಗಿರುವುದರಿಂದ ಇಂಧನ ದರ ಏರಿಕೆ ನೇರ ಪರಿಣಾಮ ರೈತರ ಮೇಲೆ ಬೀಳುತ್ತಿದೆ. ಸದ್ಯ ಪ್ರತಿ ಲೀಟರ್ ಡೀಸೆಲ್ ಬೆಲೆ ನೂರರ ಸಮೀಪದಲ್ಲಿದ್ದು, ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ಬಾಡಿಗೆ ದರ ಏರಿಕೆ: ಇಂಧನ ದರ ಏರಿಕೆ ಬೆನ್ನಲ್ಲೇ ಕೃಷಿಗೆ ಉಪಯುಕ್ತ ಯಂತ್ರೋಪಕರಣಗಳ ಬಾಡಿಗೆ ದರ ಮಾಲೀಕರು ಹೆಚ್ಚಿಸಿದ್ದಾರೆ. ಈ ಹಿಂದೆ ಟ್ರ್ಯಾಕ್ಟರ್ ಮೂಲಕ ಎಕರೆಗೆ ಮಡಿಕೆ ಹೊಡೆಯಲು ₹1500 ನೀಡಲಾಗುತ್ತಿದ್ದರೆ, ಇದೀಗ ₹2000ವರೆಗೆ ಏರಿಕೆಯಾಗಿದೆ. ರೂಟರ್ ಯಂತ್ರಕ್ಕೆ ಗಂಟೆಗೆ ₹800 ದಿಂದ ₹1000ವರೆಗೆ, ಹೊಲ ಸಮತಟ್ಟು ಮಾಡಲು ₹650 ದಿಂದ 850 ವರೆಗೆ, ಬಿತ್ತನೆ ಕಾರ್ಯಕ್ಕೆ ₹1000 ದಿಂದ ₹1300 ವರೆಗೆ ದರ ನಿಗದಿಪಡಿಸಲಾಗಿದೆ.ಈ ಹಿಂದೆ ಗಂಟೆಗೆ ₹ 800 ರಿಂದ ₹900 ವರೆಗೆ ಇದ್ದ ಜೆಸಿಬಿ ಬಾಡಿಗೆ ಈಗ ₹1000 ದಿಂದ ₹1200 ವರೆಗೆ ಏರಿಕೆಯಾಗಿದೆ. ಇದರಿಂದ ರೈತರು ಕೃಷಿ ಕಾರ್ಯ ಆರಂಭಿಸುವ ಮೊದಲೇ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಕೂಲಿಕಾರರನ್ನು ಹೊಲಗಳಿಗೆ ಕರೆದುಕೊಂಡು ಹೋಗಲು ಆಟೊ, ಟಂಟಂ ವಾಹನಗಳ ದರವೂ ಹೆಚ್ಚಳವಾಗಿದೆ. ಹಿಂದೆ ₹300 ರಿಂದ 350 ಇದ್ದ ವಾಹನ ಬಾಡಿಗೆ ಈಗ ₹500ವರೆಗೆ ಏರಿಕೆಯಾಗಿದೆ. ದೂರದ ಗ್ರಾಮಗಳಿಗೆ ಕೂಲಿಕಾರರನ್ನು ಸಾಗಿಸಲು ಕಿಮೀ ಆಧಾರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಕೂಲಿ ವೆಚ್ಚವೂ ರೈತರ ಮೇಲೆ ಹೆಚ್ಚುವರಿ ಹೊರೆಯಾಗಿದೆ.ಕಳೆದ ವರ್ಷ ಅತಿವೃಷ್ಟಿ ಹಾಗೂ ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ ಆರಂಭದಲ್ಲೇ ದುಬಾರಿ ಕೃಷಿ ವೆಚ್ಚ ಎದುರಾಗಿರುವುದರಿಂದ ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ. ಬೆಳೆ ಕೈಗೆ ಬರುವವರೆಗೂ ಖರ್ಚು ನಿರ್ವಹಿಸುವುದು ಕಷ್ಟವಾಗಿದ್ದು, ಬೆಳೆ ಉತ್ತಮವಾಗಿ ಬಂದರೂ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗುತ್ತದೆಯೇ ಎಂಬ ಚಿಂತೆಯೂ ರೈತರನ್ನು ಕಾಡುತ್ತಿದೆ.
ಕೃಷಿ ತಜ್ಞರ ಪ್ರಕಾರ, ಡೀಸೆಲ್ ದರ ಕಡಿತದ ಜತೆಗೆ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ, ರಸಗೊಬ್ಬರ ಪೂರೈಕೆಯಲ್ಲಿ ಸ್ಥಿರತೆ ಹಾಗೂ ಬಿತ್ತನೆ ಬೀಜಗಳ ದರ ನಿಯಂತ್ರಣ ಕೈಗೊಂಡಲ್ಲಿ ರೈತರಿಗೆ ನೆರವಾಗಲಿದೆ. ಇಲ್ಲದಿದ್ದರೆ ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ರೈತರು ಕೃಷಿಯಿಂದ ದೂರ ಸರಿಯುವ ಆತಂಕ ವ್ಯಕ್ತವಾಗುತ್ತಿದೆ ಎಂದಿದ್ದಾರೆ.ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಇಂಧನ ದರ ಏರಿಕೆಯಿಂದ ಯಂತ್ರೋಪಕರಣಗಳ ಬಾಡಿಗೆ ದುಬಾರಿಯಾಗಿದೆ. ಕಳೆದ ವರ್ಷ ಮಳೆಯಿಂದ ನಷ್ಟ ಅನುಭವಿಸಿದ್ದೇವೆ. ಈಗ ಕೃಷಿ ಚಟುವಟಿಕೆ ಆರಂಭಕ್ಕೂ ಸಾಲ ಮಾಡಬೇಕಾಗಿದೆ. ಸರ್ಕಾರ ಇಂಧನ ದರ ಕಡಿತ ಮಾಡಿ ಕೃಷಿ ಕ್ಷೇತ್ರಕ್ಕೆ ನೆರವಾಗಬೇಕು ಎಂದು ಹನುಮಸಾಗರ ರೈತ ಜಗದೀಶ ಕುಂಬಾರ ತಿಳಿಸಿದ್ದಾರೆ.