ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಸಂತ್ರಸ್ತ ರೈತರ ಭೂಮಿಗೆ ಸರ್ಕಾರ ಬೆಲೆ ನಿಗದಿ ಮಾಡಿದ್ದು ಐತಿಹಾಸಿಕ ತೀರ್ಪಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರಿಗೆ ಹಾಗೂ ಉತ್ತರ ಕರ್ನಾಟಕ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಸಂತ್ರಸ್ತರ ಹೋರಾಟ ವೇದಿಕೆಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ, ಒಣಬೇಸಾಯಕ್ಕೆ 30 ಲಕ್ಷ ಪರಿಹಾರವನ್ನು ಸರಕಾರ ಘೋಷಣೆ ಮಾಡಿದ್ದು, ನಾವೆಲ್ಲ ಸಂತ್ರಸ್ತರ ಜೊತೆ ಸೇರಿ ಹೋರಾಟ ಮಾಡಿದ್ದರ ಫಲವಾಗಿದೆ. ಒಂದೇ ರೀತಿಯ ಬೆಲೆಯ ಘೋಷಣೆಯಿಂದ ಎಲ್ಲ ರೈತರಿಗೂ ಅನುಕೂಲವಾಗಲಿದೆ. ಸರ್ಕಾರ ಆದಷ್ಟು ಬೇಗ ಒಂದೇ ಹಂತದಲ್ಲಿ ಭೂಮಿ ಖರೀದಿ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
2024ರ ಡಿಸೆಂಬರ್ 3ರಂದು ಬಾಗಲಕೋಟೆಯಲ್ಲಿ ಒಂದೇ ಹಂತದ ಪರಿಹಾರ, ಒಪ್ಪಂದದ ದರ ನಿಗದಿಗೆ ಸಂಬಂಧಿಸಿದಂತೆ ಹೋರಾಟ ಆರಂಭಿಸಿದ್ದೇವೆ. ಆಗ ಬೆಳಗಾವಿಯಲ್ಲಿ ಅಧಿವೇಶನ ನಡೆದಿತ್ತು. ಅಲ್ಲಿಗೆ ಮುಖ್ಯಮಂತ್ರಿಗಳು ನಮ್ಮನ್ನು ಆಹ್ವಾನಿಸಿದ್ದರು. ಆಗ ನಾವೆಲ್ಲ ಮುಖಂಡರು ಅವರಿಗೆ ಎಲ್ಲ ರೀತಿಯ ಮಾಹಿತಿ ನೀಡಿದ್ದೇವು. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದನ್ನು ಇಂದು ಈಡೇರಿಸಿದ್ದಾರೆ ಎಂದು ತಿಳಿಸಿದರು.ನಾವು ಮೊದಲು ನೀರಾವರಿಗೆ ಪ್ರತಿ ಎಕರೆಗೆ ₹50 ಲಕ್ಷ ಹಾಗೂ ಒಣಬೇಸಾಯಕ್ಕೆ ₹40 ಲಕ್ಷ ಕೇಳಿದ್ದೇವು. ಸರ್ಕಾರ ಇದಕ್ಕಾಗಿ ಮೂರ್ನಾಲ್ಕು ಸಭೆ ನಡೆಸಿತು. ಅದರಲ್ಲಿಯೂ ನಾವೆಲ್ಲರೂ ಏಕರೂಪರದ ಪರಿಹಾರಕ್ಕೆ ಒತ್ತಾಯ ಮಾಡಿದ್ದೆವು. ಅದಕ್ಕಾಗಿಯೇ ವಿಶೇಷ ಸಭೆ ಕರೆದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಬೆಲೆ ಘೋಷಣೆ ಮಾಡಿದ್ದು ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಹೇಳಿದರು.
ಅದೃಶ್ಯಪ್ಪ ದೇಸಾಯಿ ಮಾತನಾಡಿ, ಹಲವು ವರ್ಷಗಳ ಬೇಡಿಕೆಗೆ ಈಗ ಸರಕಾರ ಸ್ಪಂದಿಸಿದ್ದು, ನಾವು ಹೋರಾಟಕ್ಕೆ ಇಳಿದಾಗ 64ಕ್ಕೂ ಅಧಿಕ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದವು. ಇದೆಲ್ಲದರ ಫಲವಾಗಿಯೇ ಸರಕಾರ ಇಂದು ಮಹತ್ವ ತೀರ್ಮಾನ ಕೈಗೊಂಡಿದೆ. ಈ ನಮ್ಮ ಹೋರಾಟಕ್ಕೆ ಬೆಂಬಲಿಸಿದ ಎಲ್ಲ ಪಕ್ಷದ ಮುಖಂಡರಿಗೂ, ರೈತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಸರ್ಕಾರ ಸಂಪೂರ್ಣ ಭೂಸ್ವಾಧೀನಕ್ಕಾಗಿ ಮೂರು ವರ್ಷ ಕಾಲಾವಧಿ ನಿಗದಿ ಮಾಡಿದೆ. ಅದಕ್ಕೆ ಹಣ ಹೊಂದಿಸಿಕೊಳ್ಳುವುದಾಗಿಯೂ ಸಿಎಂ ಹೇಳಿದ್ದಾರೆ. ಸರ್ಕಾರ ಮೊದಲು ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಕಚೇರಿಗೆ ಪೂರ್ಣಾವಧಿಯ ಆಯುಕ್ತರು ಸೇರಿ ಸಿಬ್ಬಂದಿ ನೇಮಕ ಮಾಡಬೇಕು. ಅಂದಾಗ ಮಾತ್ರ ಸ್ವಾಧೀನ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯ ನಮಠ ಮಾತನಾಡಿ, ಹಿಂದಿನ ಸರ್ಕಾರ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಇದೊಂದು ಐತಿಹಾಸಕ ಕೆಲಸವಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಕೊಳ್ಳುವರು ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಹೋರಾಟ ಸಮಿತಿಯ ಪ್ರಕಾಶ ಅಂತರಗೊಂಡ ಇದ್ದರು.