ಅಂಜನಾದ್ರಿಯಲ್ಲಿರುವ ವಿದ್ಯಾದಾಸ ಬಾಬಾ ಮತ್ತು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ತೀವ್ರ ಮಾತಿನ ಚಕಮಕಿ

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ಇಬ್ಬರು ಅರ್ಚಕರ ಮಧ್ಯೆ ಬುಧವಾರ ತೀವ್ರ ವಾಗ್ವಾದ ನಡೆದು ಕೊನೆಗೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಹಲ್ಲೆ ಕುರಿತಂತೆ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ.

ಅಂಜನಾದ್ರಿಯಲ್ಲಿರುವ ವಿದ್ಯಾದಾಸ ಬಾಬಾ ಮತ್ತು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ತೀವ್ರ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪ ನಡೆದಿದೆ. ಕೊನೆಗೆ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ವಿದ್ಯಾದಾಸ ಬಾಬಾ ವಿರುದ್ಧ ಅವಾಚ್ಯ ಶಬ್ದಗಳನ್ನು ಗೋವಿಂದಾನಂದಸ್ವಾಮಿ ಬಳಕೆ ಮಾಡಿದ್ದು ಅಕ್ರೋಶಕ್ಕೆ ಕಾರಣವಾಯಿತು.

ಇಸ್ರೋ ನಿವೃತ್ತ ಅಧಿಕಾರಿ ಮುಂದೆ ವಾಗ್ವಾದ:

ಅಂಜನಾದ್ರಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಬಂದಿದ್ದ ಇಸ್ರೋದ ಮಾಜಿ ಡೆಪ್ಯೂಟಿ ಡೈರಕ್ಟರ್ ವಿ.ಎಸ್. ಶರ್ಮಾ ಅವರ ಮುಂದೆಯೇ ಈ ಇಬ್ಬರು ಅರ್ಚಕರು ವಾಗ್ವಾದಕ್ಕೆ ಇಳಿದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಇಸ್ರೋ ನಿವೃತ್ತ ಅಧಿಕಾರಿ ಅಂಜನಾದ್ರಿಗೆ ಕರೆದುಕೊಂಡು ಬಂದಿದ್ದ ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯು ಪೂಜೆ ಸಲ್ಲಿಸಿ ದೇವಸ್ಥಾನ ಇತಿಹಾಸದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ವಿದ್ಯಾದಾಸ ಬಾಬಾನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದಂತೆ ವಿದ್ಯಾದಾಸ ಬಾಬಾ ಅಕ್ರೋಶಗೊಂಡು ಹಲ್ಲೆ- ಪ್ರತಿ ಹಲ್ಲೆ ನಡೆಯಲು ಕಾರಣವಾಗಿದೆ. ಇಸ್ರೋ ನಿವೃತ್ತ ಅಧಿಕಾರಿಗೆ ಬೆಂಗಾವಲಾಗಿದ್ದ ಪೊಲೀಸರು ಮಧ್ಯಸ್ಥಿಕೆ ವಹಿಸುವ ಪ್ರಸಂಗ ನಡೆದಿದೆ.

ವಿದ್ಯಾದಾಸ ಬಾಬಾ ಅವರು ಆನ್ ಲೈನ್ ಮೂಲಕ ಎಫ್ಐಆರ್ ಮಾಡಿದ್ದು, ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.