ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿ ಕಲಿಸಿ: ಪುಟ್ಟರಾಜು

| Published : Jul 14 2024, 01:41 AM IST / Updated: Jul 14 2024, 12:46 PM IST

ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿ ಕಲಿಸಿ: ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಜಾಗತೀಕರಣದ ಪ್ರಭಾವದಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಲುಗುತ್ತಿದ್ದು ಸರ್ಕಾರಿ ಶಾಲೆಗಳು ಮುಚ್ಚದಂತೆ ಸರ್ಕಾರ ಕನ್ನಡದ ಉಳಿವಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಕಲಿಸಬೇಕು ಎಂದು 6 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹೊಸೂರು ಪುಟ್ಟರಾಜು ಆಗ್ರಹಿಸಿದರು.

 ಕಡೂರು :  ಜಾಗತೀಕರಣದ ಪ್ರಭಾವದಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಲುಗುತ್ತಿದ್ದು ಸರ್ಕಾರಿ ಶಾಲೆಗಳು ಮುಚ್ಚದಂತೆ ಸರ್ಕಾರ ಕನ್ನಡದ ಉಳಿವಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಕಲಿಸಬೇಕು ಎಂದು 6 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹೊಸೂರು ಪುಟ್ಟರಾಜು ಆಗ್ರಹಿಸಿದರು.

ಕಡೂರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಆಧುನಿಕತೆ ಸೋಗಿನಲ್ಲಿ ಇಂದು ಕನ್ನಡಕ್ಕೆ ಕುತ್ತು ಬಂದಿದೆ. ಭಾಷೆ , ಸಂಸ್ಕೃತಿ ಉಳಿಸಲು ಮಕ್ಕಳಲ್ಲಿ ಪುಸ್ತಕ ಮತ್ತು ಸಾಹಿತ್ಯ ಪ್ರೀತಿ ಬೆಳೆಸಿ ಭಾಷೆ ಉಳಿಸಲು ಮನೆಗಳಲ್ಲಿ ಸಣ್ಣ ಗ್ರಂಥಾಲಯ ಮಾಡಿ ಎಂದು ಸಲಹೆ ನೀಡಿದರು.

ಬದುಕಿಗೆ ಭರವಸೆ ಬೆಳಕು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಗ್ರಾಮೀಣರ ಬದುಕು ನಗರಿಕರಣವಾಗುತ್ತಿದೆ ಹಾಗಾಗಿ ರಾಘವಾಂಕ, ಲಕ್ಷ್ಮಿಶ, ಕುಮಾರವ್ಯಾಸ, ಹರಿಹರರ ಕಾವ್ಯಗಳು, ದಾಸ ಸಾಹಿತ್ಯ ಜನಪದ ಸಾಹಿತ್ಯ ಉಳಿಸಿಕೊಳ್ಳುವ ಕೆಲಸ ಆಗಬೇಕು. ಜೊತೆಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದೆ ಉಳಿಸುವಂತೆ ಮಾಡಬೇಕು. ಕನ್ನಡ ಶಿಕ್ಷಣದಿಂದ ಉದ್ಯೋಗ ಮೀಸಲಾತಿ ಮಾಡಿದಲ್ಲಿ ಶಾಲೆಗಳನ್ನು ರಕ್ಷಿಸುವ ಜೊತೆ ಕನ್ನಡ ಭಾಷೆ ಉಳಿಯಲು ಸಾಧ್ಯಎಂದರು.

ಹಾಗಾಗಿ ಈ ಸಮ್ಮೇಳನದ ಮೂಲಕ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಆಗಬೇಕು. ನೀರಾವರಿ ಯೋಜನೆಗಳ ಜಾರಿ, ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ನಾಟ್ಯಶಾರದೆ ಡಾ. ವೆಂಕಟಲಕ್ಷ್ಮಮ್ಮನವರ ಸಾಂಸ್ಕೃತಿಕ ಭವನ ಪೂರ್ಣಮಾಡಿ ಕಲಾ ಚಟುವಟಿಕೆ ನಡೆಯುವಂತಾಗಬೇಕು. ನನಗೆ ಈ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ನೀಡಿ ಶಿಕ್ಷಕ ವೃತ್ತಿಯನ್ನು ಗೌರವಿಸಿದ್ದು,ಅದಕ್ಕಾಗಿ ಎಲ್ಲ ಕನ್ನಡ ಮನಸ್ಸುಗಳಿಗೆ ನನ್ನ ಅರ್ಪಿಸುತ್ತೇನೆ ಎಂದರು.

ಭುವನೇಶ್ವರಿ ಭಾವಚಿತ್ರ ಅನಾವರಣ ಮಾಡಿದ ಶಾಸಕ ಕೆ.ಎಸ್. ಆನಂದ್ ಮಾತನಾಡಿ, 1948 ರಿಂದ ಕನ್ನಡ ಭಾಷೆ ರಕ್ಷಣೆ ಗಾಗಿ ಸಾಹಿತ್ಯ ಸಮ್ಮೇಳನಗಳ ಸಂಪ್ರದಾಯ ಆರಂಭವಾಯಿತು. ಪ್ರತಿ ಗ್ರಾಮ ಮಟ್ಟದಲ್ಲಿ ಕನ್ನಡ ಭಾಷೆ ರಕ್ಷಣೆ ಕಾರ್ಯ ನಡೆಯಬೇಕು. ನಮ್ಮ ತಾಲೂಕಿನಲ್ಲಿ ಕನ್ನಡ ಭಾಷೆಗೆ ಎಲ್ಲಿಯೂ ತೊಡಕಾಗಿಲ್ಲ. ಕಡೂರು ತಾಲೂಕು ಸಾಹಿತ್ಯ, ಕಲೆ,ಮತ್ತು ಚಿತ್ರರಂಗಕ್ಕೂ ಅನೇಕ ಕೊಡುಗೆ ನೀಡಿದೆ. ನಿರೂಪಕರಾದ ಅಪರ್ಣಾ ಅವರು ಕಡೂರಿನವರೆಂದು ತಡವಾಗಿ ತಿಳಿಯಿತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಕನ್ನಡ ಭಾಷೆ ಸುಂದರ. ಅಂತಹ ಭಾಷೆ, ಬರವಣಿಗೆ ಪಡೆದ ನಾವು ಪುಣ್ಯವಂತರು. ಕಡೂರು ತಾಲೂಕನ್ನು ಸಾಂಸ್ಕೃತಿಕ ಕ್ಷೇತ್ರವಾಗಿ ಮಾಡಲು ಸದಾ ತಮ್ಮ ಸಹಕಾರ ಇರುತ್ತದೆ. ಆದಷ್ಟು ಬೇಗ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ಜಾರಿ ಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸಮ್ಮೇಳನ ಉದ್ಘಾಟಿಸಿದ ಚಿಂತಕ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಒಂದು ಭಾಷೆ ಜನಕ್ಕೆ ಒಡನಾಡಿ ಆಗಬೇಕು. ಜನ ಸೇರುತ್ತಾರೆ ಆದರೆ ಮನಸ್ಸು ಸೇರುವುದಿಲ್ಲ. ಜನಮನದ ಮನಸುಗಳು ಸೇರಿದರೆ ಭಾಷೆ ಉಳಿಯಲು ಸಾಧ್ಯ. ಕನ್ನಡ ನಾಡು ನುಡಿ ಬಗ್ಗೆ ಪ್ರೀತಿ ಇರಬೇಕು. ಪದ್ಮಶ್ರೀ ಪುರಸ್ಕೃತ ನೃತ್ಯಗಾರ್ತಿ ಕಡೂರು ವೇದಾ ನಗರದ ವೆಂಕಟ ಲಕ್ಷ್ಮಮ್ಮನವರ ಹೆಸರಿನಲ್ಲಿ ಸ್ಮಾರಕ ಮತ್ತು ಸಂಶೋಧನಾ ಕೇಂದ್ರ ಆಗಬೇಕು. ಇದರಿಂದ ನಾಡಿನ ನೃತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ. ನಮ್ಮೂರಿನ ಕವಿ ದೇವನೂರಿನ ಶ್ರೀ ಲಕ್ಷ್ಮೀಶ ಕವಿ ಕೃತಿಗಳನ್ನು ಜಗತ್ತಿಗೆ ತಿಳಿಸಲು ಕ್ರಮ ವಹಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಸಮ್ಮೇಳನದಲ್ಲಿ ಚಿತ್ರನಟ ಕಡೂರು ಧರ್ಮಣ್ಣ ಮತ್ತಿತರರನ್ನು ಗೌರವಿಸಲಾಯಿತು. ಅಜ್ಜಂಪುರ ಸೂರಿ ಶ್ರೀನಿವಾಸ್ , ಶರತ್ ಕೃಷ್ಣಮೂರ್ತಿ, ಭಂಡಾರಿ ಶ್ರೀನಿವಾಸ್, ಸಿಂಗಟಗೆರೆ ಸಿದ್ದಪ್ಪ, ಕೆ.ಜಿ.ಶ್ರೀನಿವಾಸಮೂರ್ತಿ ಮಾತನಾಡಿದರು. ಬೆಳಿಗ್ಗೆ ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜುರವರನ್ನು ಸಂಪ್ರದಾಯಿಕವಾಗಿ ಮೆರವಣಿಗೆ ಮಾಡಲಾಯಿತು.

ವಿವಿಧ ಲೇಖಕರಾದ ಶಫಿತಾ ಬೇಗಂ--ನೆನಪಿನ ಪಯಣ, ಡಾ.ವಿಜಯಲಕ್ಷ್ಮೀ ಪಿ.ಎಚ್.-ನೆನಪರಳಿದಾಗ ,ಕಂಚುಗಾರನಹಳ್ಳಿ ಸತೀಷ್- ನನ್ನವಳು ನಕ್ಕಾಗ, ಚೌಡ್ಲಾಪುರ ಸೂರಿ- ಗರಿಬಿಚ್ಚಿತು ಮತ್ತು ಜ್ಞಾನಧಾರೆ, ಕುಪ್ಪಾಳು ಶಾಂತಮೂರ್ತಿ- ಹೆಜ್ಜೆ ಮೂಡಿದ ಹಾದಿಗಳು ಪುಸ್ತಕಗಳ ಬಿಡುಗಡೆ ಮಾಡಲಾಯಿತು.

 ಶಿಕ್ಷಕರ ಬೆಳವಣಿಗೆಗೆ ಅಸಹಕಾರ: ಬೇಸರ ಶಿಕ್ಷಣಕ್ಕಿಂತ ಬೇರೆ ವೃತ್ತಿ ಮತ್ತೊಂದಿಲ್ಲ ತಾವು ಶಿಕ್ಷಕ ಮತ್ತು ಸಾಹಿತ್ಯ ಅಭಿಮಾನಿ. ಶಿಕ್ಷಕರೊಬ್ಬರು ಸಮ್ಮೇಳನ ಅಧ್ಯಕ್ಷ ರಾಗಿರುವುದು ಶಿಕ್ಷಣ ಇಲಾಖೆಗೆ ಗೌರವ ತರುವ ವಿಚಾರ. ಆದರೆ ಇಂದು ಈ ಸಮ್ಮೇಳನದಲ್ಲಿ ಶಿಕ್ಷಕರು, ಇಲಾಖೆ ಅಧಿಕಾರಿಗಳ ನಡವಳಿಕೆ ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು ತಮಗೆ ನೋವು ತಂದಿದೆ. ಶಿಕ್ಷಕರ ಬೆಳವಣಿಗೆಗೆ ಸಹಕರಿಸಬೇಕಾದವರ ನಡವಳಿಕೆಯಿಂದ ತಮಗೆ ಬೇಸರವಾಗಿದೆ ಎಂದು ಹೊಸೂರು ಪುಟ್ಟರಾಜು ಹೇಳಿದರು.