ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಸಮಸ್ಯೆಗಳನ್ನು ಬಗೆಹರಿಸಿ, ಉತ್ತಮ ಆರೋಗ್ಯ ಸೇವೆಯನ್ನು ಅಲ್ಲಿ ನೀಡುವಂತೆ ಮಾಡುವ ಮೂಲಕ ಪಿಎಚ್‌ಸಿಗಳನ್ನು ಬಲಪಡಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಸಮಸ್ಯೆಗಳನ್ನು ಬಗೆಹರಿಸಿ, ಉತ್ತಮ ಆರೋಗ್ಯ ಸೇವೆಯನ್ನು ಅಲ್ಲಿ ನೀಡುವಂತೆ ಮಾಡುವ ಮೂಲಕ ಪಿಎಚ್‌ಸಿಗಳನ್ನು ಬಲಪಡಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಸಚಿವರಾದ ಬಳಿಕ ಪ್ರಥಮವಾಗಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನತೆಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲು ಅಲ್ಲಿನ ಸಮಸ್ಯೆ, ಕೊರತೆಗಳನ್ನು ಬಗೆಹರಿಸಬೇಕಾಗಿದ್ದು, ಇರುವ ಪ್ರಾಥಮಿಕ ಕೇಂದ್ರ, ಆಸ್ಪತ್ರೆಗೆ ಸಮಸ್ಯೆ, ಬೆಡಿಕೆ ಈಡೇರಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಮುಂದೆ ತಾಲೂಕಿನ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಚಿವರು ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಾರ್ಮಾಸಿಸ್ಟ್‌ಗಳು, ಲ್ಯಾಬ್ ಟೆಕ್ನಿಶಿಯನ್, ಸೇರಿದಂತೆ ಸಿಬ್ಬಂದಿ, ವೈದ್ಯರ ಕೊರತೆಗಳನ್ನು ಬಗೆಹರಿಸಬೇಕು ಎಂದು ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪಿಎಚ್‌ಸಿ ವೈದ್ಯಾಧಿಕಾರಿಗಳು ಆಗ್ರಹಿಸಿದರು. ಸುಳ್ಯದ ಬೆಳ್ಳಾರೆ, ಕೊಲ್ಲಮೊಗ್ರು, ಬೆಳ್ತಂಗಡಿಯ ಪಡಂಗಡಿ ಸೇರಿದಂತೆ ಜಿಲ್ಲೆಯ ಪಿಎಚ್‌ಸಿಗಳ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಜಿಲ್ಲೆಯಲ್ಲಿ 87 ಫಾರ್ಮಾಸಿಸ್ಟ್ ಮಂಜೂರಾತಿಯಾಗಿದ್ದು, 31 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 26 ಮಂದಿ ಹೊರಗುತ್ತಿಗೆಯಲ್ಲಿ ನೇಮಕ ಮಾಡಲಾಗಿದ್ದು, ಬಾಕಿ ಹುದ್ದೆ ಖಾಲಿಯಾಗಿವೆ. ಮಂಜೂರಾತಿಗೊಂಡ 81 ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳಲ್ಲಿ 21 ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾಹಿತಿ ನೀಡಿದರು. ಪಿಎಚ್‌ಸಿಗಳಲ್ಲಿ ಡಾಟಾ ಎಂಟ್ರಿ ಅಪರೇಟರ್‌ಗಳ ಬೇಡಿಕೆ ಬಗ್ಗೆ ಆಗ್ರಹಿಸಲಾಯಿತು.
1000 ಜನಸಂಖ್ಯೆಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರ ನೇಮಕವಾಗಬೇಕಿದೆ. ಆದರೆ ಕೆಲವೆಡೆ 2000 ಜನಸಂಖ್ಯೆಗೆ ಒಬ್ಬರಂತೆಯೂ ಆಶಾ ಕಾರ್ಯಕರ್ತೆಯರಿಲ್ಲ. ಹಲವು ಮಂದಿ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ನೇಮಕವಾಗಿಲ್ಲ ಎಂಬ ಆಕ್ಷೇಪವೂ ಸಭೆಯಲ್ಲಿ ತಾಲೂಕು ವೈದ್ಯರಿಂದ ಕೇಳಿಬಂತು. ಗುತ್ತಿಗೆ ವೈದ್ಯರ ಖಾಯಂಗೆ ಒತ್ತಾಯ:ಸರ್ಕಾರಿ ಆಸ್ಪತ್ರೆಗೆ ವೈದ್ಯರು ಯಾಕೆ ಬರುತ್ತಿಲ್ಲ, ಬರುವಂತೆ ಮಾಡಲು ಏನು ಮಾಡಬಹುದು ಎಂದು ಯು.ಟಿ.ಖಾದರ್ ಸಭೆಯಲ್ಲಿ ಸಲಹೆಗಳನ್ನು ಕೇಳಿದರು. ಗುತ್ತಿಗೆಯಡಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂ ಮಾಡುವ ಪದ್ಧತಿ ಸ್ಥಗಿತಗೊಳಿಸಲಾಗಿದೆ. ಉದ್ಯೋಗ ಭದ್ರತೆ ಇಲ್ಲದ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ. ಪಿಜಿಗೆ ಅವಕಾಶ ನೀಡಿದರೆ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ಆಕರ್ಷಿಸಬಹುದು ಎಂದು ಹಿರಿಯ ಅಧಿಕಾರಿಗಳು, ಪಿಎಚ್‌ಸಿ ವೈದ್ಯರು ಸಲಹೆ ನೀಡಿದರು.
ಪಿಎಚ್‌ಸಿ ವೈದ್ಯರು ತಮ್ಮದೇ ಸ್ವಂತ ಕ್ಲಿನಿಕ್ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಯು.ಟಿ.ಖಾದರ್ ಸಲಹೆ ನೀಡಿದರು.ತುರ್ತು ಸ್ಟಾಫ್ ನರ್ಸ್ ನೇಮಕ: ದ.ಕ. ಜಿಲ್ಲೆಯ ಲೇಡಿಗೋಶನ್‌ಗೆ 22 ಹಾಗೂ ವೆನ್‌ಲಾಕ್‌ಗೆ 10 ಸ್ಟಾಫ್ ನರ್ಸ್‌ಗಳ ತುರ್ತು ಅಗತ್ಯವಿದ್ದು, ನೇರ ನೇಮಕಾತಿ ಮೂಲಕ ಕ್ರಮ ವಹಿಸಲಾಗುವುದು. ತಲಾ 17,000 ರು. ವೇತನದೊಂದಿಗೆ ತಕ್ಷಣ ನೇಮಕಾತಿ ಆದೇಶ ನೀಡಲಾಗುತ್ತಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಖಾದರ್ ತಿಳಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಪಂ ಸಿಇಒ ವಿನಾಯಕ ಕರ್ಭಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು.ಹೊಸ ವೈದ್ಯರಿಗೆ ತಾರತಮ್ಯ ಮಾಡದಿರಿ: ಖಾದರ್ ಕಿವಿಮಾತು
ವೈದ್ಯರ ಹುದ್ದೆಗೆ ಬರುವ ಹೊಸಬರನ್ನು ಚೆನ್ನಾಗಿ ಮಾತನಾಡಿಸಬೇಕು. ಅವರೊಂದಿಗೆ ಹಿರಿಯ ವೈದ್ಯಾಧಿಕಾರಿಗಳು ತಾರತಮ್ಯ ಮಾಡಬಾರದು. ಬೇಕಾಬಿಟ್ಟಿ ಮಾತನಾಡಿದರೆ ಯಾವ ಡಾಕ್ಟರ್ ಕೂಡ ಬರುವುದಿಲ್ಲ. ಅಧಿಕಾರಿಗಳ ವರ್ತನೆಯಿಂದ ವೈದ್ಯರು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ನಾನು ಮಂಗಳೂರು ಡಿಎಚ್‌ಒ ಬಗ್ಗೆ ಮಾತನಾಡುತ್ತಿಲ್ಲ, ಇದು ಎಲ್ಲರ ಸಮಸ್ಯೆ. ಮೊದಲು ಹಿರಿಯ ಅಧಿಕಾರಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಬರಬೇಕು ಎಂದು ಸಚಿವರು ಸೂಚಿಸಿದರು.ಜಿಲ್ಲೆಯ ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಬಗ್ಗೆ ಸಚಿವರು ಡಿಎಚ್‌ಒರಲ್ಲಿ ಮಾಹಿತಿ ಕೇಳಿದಾಗ ತಕ್ಷಣದಲ್ಲಿ ಸಮರ್ಪಕ ಲೆಕ್ಕ ನೀಡದ ಡಿಎಚ್‌ಒ ಅವರಿಗೆ ಸಚಿವರು ನೀವು ಡಾಕ್ಟರ್ ಅಲ್ವಾ, ನಿಮ್ಮಲ್ಲಿ ಮಾಹಿತಿ ಇಲ್ಲವಾ ಎಂದು ಪ್ರಶ್ನಿಸಿದರು. ಕೆಳ ಹಂತದಿಂದ ಸಲ್ಲಿಕೆಯಾದ ಪ್ರಸ್ತಾವನೆಗಳ ಬಗ್ಗೆ ನಿರಂತರವಾಗಿ ಡಿಎಚ್‌ಒ ಫಾಲೋಅಪ್ ಮಾಡಬೇಕು ಎಂದು ಸಚಿವರು ಸೂಚಿಸಿದರು.