ಸಾರಾಂಶ
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಿ ಶಾಲೆಗಳಿಗೆ 2017ರ ವರೆಗೆ ನೇಮಕವಾದ ಶಿಕ್ಷಕರನ್ನು ಒಂದರಿಂದ ಏಳನೇ ತರಗತಿಗೆ ನೇಮಕವಾದ ಶಿಕ್ಷಕರು ಎಂದು ಪರಿಗಣಿಸಬೇಕು ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ವಿವಿಧ ಹಂತಗಳಲ್ಲಿ ನ್ಯಾಯ ಸಿಗುವವರೆಗೂ ಅಂತಿಮ ಹಂತದ ನಿರಂತರ ಹೋರಾಟ ನಡೆಸಲು ಶಿಕ್ಷಕ ಸಮೂಹ ನಿರ್ಧರಿಸಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ಆ. 25ರ ಒಳಗಾಗಿ ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿಸಿ, ಜಿಪಂ ಸಿಇಒ, ಡಿಡಿಪಿಐ ಹಾಗೂ ಉಸ್ತುವಾರಿ ಸಚಿವರ ಮೂಲಕ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗುವುದು ಎಂದರು.ಆ. 27ರ ಒಳಗೆ ಶಿಕ್ಷಕರ ಬೇಡಿಕೆಗಳು ಈಡೇರದೇ ಇದ್ದಲ್ಲಿ ಸೆ. 3ರಂದು ಎಲ್ಲ ಶಿಕ್ಷಕರು ಸಾಂದರ್ಭಿಕ ರಜೆ ಹಾಕಿ ರಾಜ್ಯ ಮಟ್ಟದ ಫ್ರೀಡಂ ಪಾರ್ಕ್ ಚಲೋ ಹೋರಾಟ ನಡೆಸಲಾಗುವುದು. ಅಲ್ಲದೆ 6ರಿಂದ 8ನೇ ತರಗತಿಗಳ ಬೋಧನೆ ಬಹಿಷ್ಕಾರ ಮಾಡಿ ಕೇವಲ 1ರಿಂದ 5ನೇ ತರಗತಿಗಳಿಗೆ ಮಾತ್ರ ಪಾಠ ಮಾಡಲು ನಿರ್ಧರಿಸಲಾಗಿದೆ ಎಂದರು.
ಸೆ. 3ರಂದು ಹೋರಾಟ ನಡೆಸಿದರೂ ಶಿಕ್ಷಕರ ಬೇಡಿಕೆ ಈಡೇರದೇ ಇದ್ದಲ್ಲಿ ಸೆ.4ರಿಂದ 5ರವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟಿಸಲಾಗುವುದು. ಬಳಿಕ ಫ್ರೀಡಂ ಪಾರ್ಕ್ ನಲ್ಲಿಯೇ ಸಂಘದ ಎಲ್ಲ ಪದಾಧಿಕಾರಿಗಳ ಹಾಗೂ ಪ್ರತಿನಿಧಿಗಳ ನೇತೃತ್ವ ದಲ್ಲಿ ಶಿಕ್ಷಕರ ದಿನಾಚರಣೆ ನಡೆಸುತ್ತೇವೆ. ಜೊತೆಗೆ ನಮ್ಮ ಬೇಡಿಕೆ ಈಡೇರುವವರೆಗೆ ನಿರಂತರ ಹೋರಾಟ ನಡೆಸಲಿದ್ದೇವೆ. ಹೀಗಾಗಿ ಇದು ನಮ್ಮ ಅಂತಿಮ ಹಂತದ ಹೋರಾಟ ಎಂದು ಮಾಹಿತಿ ನೀಡಿದರು.2017ಕ್ಕೂ ಮೊದಲು ನೇಮಕವಾದ ಪದವಿಪಡೆದ ಶಿಕ್ಷಕರನ್ನು 1ರಿಂದ 7ನೇ ತರಗತಿ ಶಿಕ್ಷಕರು ಎಂದು ಪರಿಗಣಿಸಿ ಸೇವಾ ಜೇಷ್ಟತೆಯೊಂದಿಗೆ ಪದನಾಮೀಕರಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಮತ್ತು ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡಬೇಕು. ಅನ್ಯ ಕಾರ್ಯಗಳಿಂದ ಹಾಗೂ ಆನ್ಲೈನ್ ಕೆಲಸಗಳಿಂದ ಶಿಕ್ಷಕರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಮಾಡಬೇಕು ಹಾಗೂ ಇತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಈ ಹೋರಾಟ ಕೈಗೊಳ್ಳಲಾಗಿದೆ ಎಂದರು.
ಕಳೆದ ವರ್ಷ ಇದೆ ಅವಧಿಯಲ್ಲಿ ಶಿಕ್ಷಕರು ಹೋರಾಟ ಆರಂಭಿಸಿದ್ದರು. ಆಗ ಸಿಎಂ, ಶಿಕ್ಷಣ ಸಚಿವರು ಸಭೆ ನಡೆಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಂತಿಮ ಹಂತದ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿಕ್ಷಕರ ಸಂಘದ ಪ್ರಮುಖರಾದ ಎಂ.ಬಿ. ಮಂಜುನಾಥ್, ಎಲ್.ಟಿ.ಅಜ್ಜಯ್ಯ, ಹರೀಶ್, ಬೈರೇಗೌಡ, ಬಸಪ್ಪ, ಕುಮಾರಪ್ಪ, ಪುಟ್ಟಸ್ವಾಮಿ, ಶ್ರೀನಿವಾಸ್, ನವೀನ್, ಧರಣೀಶ್ ಉಪಸ್ಥಿತರಿದ್ದರು.