ಹೊಸಪೇಟೆಯಿಂದ ಬಾಗಲಕೋಟೆಗೆ ತೆರಳಿದ ಪ್ರಧಾನಿ ಮೋದಿ

| Published : Apr 30 2024, 02:05 AM IST

ಸಾರಾಂಶ

ಪ್ರಧಾನಿ ಮೋದಿ ಹೋಟೆಲ್‌ನಿಂದ ಆಗಮಿಸುತ್ತಿದ್ದಂತೆಯೇ ಎಸ್‌ಪಿಜಿ ಮಾರ್ಗದರ್ಶನದಲ್ಲಿ ವಿಜಯನಗರ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಿದರು.

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ಹೊಸಪೇಟೆಯಿಂದ ಸೋಮವಾರ ಬೆಳಗ್ಗೆ 11:15ರ ಸುಮಾರಿಗೆ ಬಾಗಲಕೋಟೆಯತ್ತ ಸೇನಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದರು.

ನಗರದ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ್ದ ಅವರು, ನಗರದ ರಾಯಲ್‌ ಆರ್ಕೀಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೆಲ್‌ಗೆ ಪೊಲೀಸರಿಂದ ಸರ್ಪಗಾಲು ಹಾಕಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆ ಮಾರ್ಗದಲ್ಲಿ ಓಡಾಡುವ ವಾಹನಗಳನ್ನು ತಪಾಸಣೆ ನಡೆಸಲಾಯಿತು.ಪ್ರಧಾನಿ ಮೋದಿ ಹೋಟೆಲ್‌ನಿಂದ ಆಗಮಿಸುತ್ತಿದ್ದಂತೆಯೇ ಎಸ್‌ಪಿಜಿ ಮಾರ್ಗದರ್ಶನದಲ್ಲಿ ವಿಜಯನಗರ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಿದರು. ಪೊಲೀಸರು ಹಾಗೂ ಎಸ್‌ಪಿಜಿ ಭದ್ರತಾ ಸಿಬ್ಬಂದಿ ಬೆಂಗಾವಲು ಪಡೆಯೊಂದಿಗೆ ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯದ ಬಳಿ ಕಾರಿನಲ್ಲೇ ಹೆಲಿಪ್ಯಾಡ್‌ಗೆ ಆಗಮಿಸಿದ ಅವರು, ಬಳಿಕ ಬಿಜೆಪಿಯ ಸ್ಥಳೀಯ 15 ಮಂದಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಳಿಕ ಈ ಕಾರ್ಯಕರ್ತರು ಪ್ರಧಾನಿ ಅವರನ್ನು ಬೀಳ್ಕೊಟ್ಟರು. ನಂತರ ಅವರು ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲೂ ಪ್ರಧಾನಿ ಮೋದಿ ಹೊಸಪೇಟೆಗೆ ಆಗಮಿಸಿ ಪ್ರಚಾರ ಕೈಗೊಂಡಿದ್ದರು. ವರ್ಷದ ಅಂತರದಲ್ಲಿ ಎರಡನೇ ಬಾರಿ ಅವರು ಹೊಸಪೇಟೆಗೆ ಆಗಮಿಸಿದ್ದು, ಇದೇ ಮೊದಲ ಬಾರಿಗೆ ಅವರು ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಜಿಲ್ಲಾ ಪೊಲೀಸರು ಕೂಡ ಸೂಕ್ತ ಭದ್ರತೆ ಕೈಗೊಂಡಿದ್ದರು.