ಪ್ರಧಾನಿ ಮೋದಿ ಅವರಿಂದ ಉನ್ನತ ರಾಷ್ಟ್ರ ರೂಪಿಸುವ ಗುರಿ: ಯಧುವೀರ್ ಒಡೆಯರ್

| Published : Oct 13 2025, 02:01 AM IST

ಸಾರಾಂಶ

ಭಾರತ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಂತಹ ಜಿಮ್‌ಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಕಸಿತ ಭಾರತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಒಂದು ಉನ್ನತ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಿದ್ದಾರೆ. ಇದಕ್ಕೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದು ಮೈಸೂರು-ಕೊಡಗು ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ನೂತನವಾಗಿ ಸ್ಥಾಪಿಸಿರುವ ಗೋಲ್ಡ್ಸ್ ಜಿಮ್ ಉದ್ಘಾಟಿಸಿ ಮಾತನಾಡಿ, ವಿಕಸಿತ ಭಾರತ ದೂರದೃಷ್ಟಿಯ ಕಲ್ಪನೆಯಾಗಿದೆ. ಇದು ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಕೇಂದ್ರೀಕರಿಸುತ್ತದೆ. ಇದನ್ನು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧಿಸಲಾಗದು. ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದರು.

ಭಾರತ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಂತಹ ಜಿಮ್‌ಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ, ಸುಸ್ಥಿರ ಅಭಿವೃದ್ಧಿ, ರಾಸಾಯನಿಕ ಮುಕ್ತ ವಾತಾವರಣ, ಭ್ರಷ್ಟಾಚಾರ ರಹಿತ ಬದುಕು ಮತ್ತು ಉತ್ತಮ ಆಡಳಿತ, ಯಾವುದೇ ಭಾಷೆ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸಂಘರ್ಷವಿಲ್ಲದೆ ಐಕ್ಯರಾಗುವಂತಹ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಆರೋಗ್ಯಕರ ಸಮಾಜ ಸೃಷ್ಟಿಸುವುದಕ್ಕೆ ಕೇಂದ್ರದಿಂದ ಅತ್ಯಂತ ಒಳ್ಳೆಯ ಕೆಲಸಗಳು ಆಗುತ್ತಿವೆ. ಇದು ಎಷ್ಟೇ ಆದರೂ ಸರ್ಕಾರದಿಂದ ಸಹಾಯ ಬಂದರೂ ನಾಗರಿಕರ ಹೊಣೆಗಾರಿಕೆಯೂ ಮುಖ್ಯವಾಗುತ್ತದೆ. ಸ್ವಯಂ ಆಸಕ್ತಿಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂಬ ಮನೋಭಾವನೆಯೂ ಜನರಲ್ಲಿ ಬರಬೇಕು ಎಂದರು.

ಮಂಡ್ಯ ಮತ್ತು ಅರಮನೆಗೆ ಒಂದು ರೀತಿಯ ನಿಕಟ ಹಾಗೂ ಭಾವನಾತ್ಮಕ ಸಂಬಂಧವಿದೆ. ಹಿಂದಿನಿಂದಲೂ ಒಂದು ಬಾಂಧವ್ಯ ವೃದ್ಧಿಯಾಗಿದೆ. ಆ ಕಾರಣಕ್ಕೆ ಜಿಲ್ಲೆಯ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆಯೂ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ರೀತಿಯಲ್ಲಿ ಹೋರಾಟ ಮಾಡುವುದು ಅಗತ್ಯ ಎಂದರು.

ಈ ವೇಳೆ ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ, ಜಿಮ್ ಮಾಲೀಕರಾದ ಪ್ರಭಾವತಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಮುಖಂಡರಾದ ಪ್ರಸನ್ನ, ಲಂಕೇಶ್, ಸಿ.ಟಿ. ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.