ದೇಶದಲ್ಲಿ ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಪರಿಹಾರ

| Published : Jan 27 2024, 01:15 AM IST

ದೇಶದಲ್ಲಿ ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಶತಮಾನಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ದೇಶ ಎದುರಿಸುತ್ತಿದ್ದ ಹಲವು ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಸಮರ್ಥ ನಾಯಕತ್ವದಿಂದಾಗಿ ಪರಿಹಾರ ದೊರೆಯುತ್ತಿದೆ. 2047ರಲ್ಲಿ ಸಂಪೂರ್ಣ ಅಭಿವೃದ್ಧಿ ಮೂಲಕ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರ ಭಾರತ ಎಂದು ಗುರುತಿಸಿಕೊಳ್ಳುವ ದೂರದೃಷ್ಟಿಯಡಿ ಮೋದಿ ಸಾಗುತ್ತಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ ನಂ.1 ಸ್ಥಾನವನ್ನು ಪಡೆಯುವ ಮೂಲಕ ಸಾಗುತ್ತಿರುವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ, ವಿಶ್ವಕ್ಕೇ ಮಾದರಿಯಾಗಿದೆ ಎಂದು ಕ್ಷೇತ್ರದ ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಸ್ವಾತಂತ್ರ್ಯಾ ನಂತರದಲ್ಲಿ ದೇಶ ಎದುರಿಸುತ್ತಿದ್ದ ಹಲವು ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಸಮರ್ಥ ನಾಯಕತ್ವದಿಂದಾಗಿ ಪರಿಹಾರ ದೊರೆಯುತ್ತಿದೆ ಎಂದು ಕ್ಷೇತ್ರದ ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.

75ನೇ ಗಣರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ವಿಶ್ವಕ್ಕೇ ಮಾದರಿ:

ಹಲವು ಶತಮಾನಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ದೇಶದ ಜನತೆಯ ಕನಸು ಪ್ರಧಾನಿ ಮೋದಿ ಅವರಿಂದ ಸಾಕಾರಗೊಂಡಿದೆ. ರಾಮರಾಜ್ಯದ ಕಲ್ಪನೆಯು ಈಡೇರಿದೆ. ಮೋದಿ ಅವರ ಆಡಳಿತವನ್ನು ದೇಶದ ಜನತೆ ಮೆಚ್ಚಿಕೊಂಡಿದ್ದಾರೆ. 2047ರಲ್ಲಿ ಸಂಪೂರ್ಣ ಅಭಿವೃದ್ಧಿ ಮೂಲಕ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರ ಭಾರತ ಎಂದು ಗುರುತಿಸಿಕೊಳ್ಳುವ ದೂರದೃಷ್ಟಿಯಡಿ ಮೋದಿ ಸಾಗುತ್ತಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ ''''ನಂ.1 ಸ್ಥಾನವನ್ನು ಪಡೆಯುವ ಮೂಲಕ ಸಾಗುತ್ತಿರುವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ, ವಿಶ್ವಕ್ಕೇ ಮಾದರಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿಗೆ ಅಗತ್ಯವಾದ ಸಕಲ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಮೂಲಕ ಆಧುನಿಕ ಭಗೀರಥ ಎಂಬ ಹಿರಿಮೆಯನ್ನು ಹೊಂದಿದ್ದಾರೆ ತಾಲೂಕಿನ ಸರ್ವತೋಮುಖ ಅಭಿವೃದ್ದಿಯ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಅಧಿಕ ಭತ್ತದ ಇಳುವರಿ ಮೂಲಕ ಸಾಧನೆಗೈದ ಕೃಷಿಕರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಪಥ ಸಂಚಲನಕ್ಕಾಗಿ ಬಾಪೂಜಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪುರಸಭಾ ಸದಸ್ಯ ಪಾಲಾಕ್ಷಪ್ಪ, ರೂಪಕಲಾ ಹೆಗ್ಡೆ, ರೂಪ, ಫೈರೋಜಾ ಭಾನು, ಟಿಎಪಿಸಿಎಂಎಸ್‌ ಅಧ್ಯಕ್ಷ ಸುಧೀರ್‌ ಮಾರವಳ್ಳಿ, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ತಾಪಂ ಇಒ ಪರಮೇಶ್, ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್, ಬಿಸಿಎಂ ಕಲ್ಯಾಣಾಧಿಕಾರಿ ಉಮೇಶ್, ಮುಖಂಡ ಎಚ್‌.ಟಿ. ಬಳಿಗಾರ್, ವಸಂತಗೌಡ, ಬಿ.ಡಿ.ಭೂಕಾಂತ್‌, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

- - -

ಟಾಪ್‌ ಕೋಟ್‌

ದೇಶದ ಶ್ರೇಷ್ಠ ಸಂವಿಧಾನ ಕೊಡಮಾಡಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು. ಆ ಮೂಲಕ ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಧಾನಿ ಸಂಕಲ್ಪ ಸಾಕಾರಗೊಳಿಸಲು ಯುವಸಮುದಾಯ ಜೊತೆಯಾಗಬೇಕು

- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ

- - -

-26ಕೆಎಸ್‌ಕೆಪಿ1: 75ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ದ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರ ಗೌರವ ವಂದನೆಯನ್ನು ಸ್ವೀಕರಿಸಿದರು.