ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿರುವುದು ಸರಿ ಇದೆ. ಚಿನ್ನದ ಉದ್ಯಮ ಪ್ರೋತ್ಸಾಹಿಸಲು ನಗರದಲ್ಲಿ ಜ್ಯೂಯಲರಿ ಪಾರ್ಕ್ ಸ್ಥಾಪಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕರ್ನಾಟಕ ಜ್ಯೂಯಲರ್ಸ್ ಅಸೋಸಿಯೇಷನ್ ಖಜಾಂಚಿ ಬಿ.ವಿ.ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿರುವುದು ಸರಿ ಇದೆ. ಚಿನ್ನದ ಉದ್ಯಮ ಪ್ರೋತ್ಸಾಹಿಸಲು ನಗರದಲ್ಲಿ ಜ್ಯೂಯಲರಿ ಪಾರ್ಕ್ ಸ್ಥಾಪಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕರ್ನಾಟಕ ಜ್ಯೂಯಲರ್ಸ್ ಅಸೋಸಿಯೇಷನ್ ಖಜಾಂಚಿ ಬಿ.ವಿ.ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ‘ಮಧ್ಯಪ್ರಾಚ್ಯ ಯುದ್ಧದಿಂದ ಅಂತಾರಾಷ್ಟ್ರೀಯ ಸಂಘರ್ಷ ಉಂಟಾಗಿದೆ. ಬೆಲೆ ಏರಿಕೆ ತಡೆಗಟ್ಟಲು ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಿ’ ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿರುವುದು ದೇಶದ ಹಿತದೃಷ್ಟಿಯಿಂದ ಸರಿ ಇದೆ. ಇದನ್ನು ನಾವು ಖಂಡಿಸುವುದಿಲ್ಲ. ಬೆಂಗಳೂರಿನಲ್ಲಿ ಜ್ಯೂಯಲರಿ ಪಾರ್ಕ್ ಸ್ಥಾಪಿಸಿದರೆ ವಿದೇಶಿ ವಿನಿಮಯವೂ ಹೆಚ್ಚಲಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ಒಂದು ವರ್ಷದಿಂದ ಚಿನ್ನಾಭರಣಗಳ ವ್ಯಾಪಾರ ಕಡಿಮೆ ಆಗಿದ್ದು ಕೆಲಸವಿಲ್ಲದೇ ಅಕ್ಕಸಾಲಿಗರು ಸಂಕಷ್ಟದಲ್ಲಿ ಇದ್ದಾರೆ. ಜ್ಯೂಯಲರಿ ಪಾರ್ಕ್ ಸ್ಥಾಪಿಸಿದರೆ ಇಲ್ಲಿಯೇ ಆಭರಣಗಳನ್ನು ತಯಾರಿಸಿ ರಫ್ತು ಮಾಡುವುದರಿಂದ ವಿದೇಶಿ ವಿನಿಮಯ ಗಳಿಸಬಹುದು. ನಾವು ಆಭರಣಗಳನ್ನು ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ಇದರಿಂದ ಕ್ರಾಫ್ಟ್ ಮತ್ತು ಜ್ಯೂಯಲರಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.ವಿದೇಶಿ ವಿನಿಮಯ ಗಳಿಕೆ:
ಚೀನಾದಲ್ಲಿ ಯಂತ್ರಗಳನ್ನು ಬಳಸಿ ಆಭರಣಗಳಿಗೆ ಕುಸುರಿ ಕೆಲಸ ಮಾಡಿ ಅಮೆರಿಕ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡುತ್ತಾರೆ. ಆದರೆ ನಮ್ಮಲ್ಲಿ ಅಕ್ಕಸಾಲಿಗರೇ ಅದ್ಭುತವಾದ ಡಿಸೈನ್‌ಗಳನ್ನು ಕೈಯಲ್ಲೇ ತಯಾರಿಸುತ್ತಾರೆ. ಇದರಿಂದಾಗಿ ಜ್ಯೂಯಲರಿ ಪಾರ್ಕ್ ಸ್ಥಾಪನೆಯಾದರೆ ಅಕ್ಕಸಾಲಿಗರಿಗೆ ಉದ್ಯೋಗ ದೊರೆಯುತ್ತದೆ. ನಾವು ಆಭರಣಗಳನ್ನು ರಫ್ತು ಮಾಡಿ ವಿದೇಶಿ ವಿನಿಮಯ ಗಳಿಸಬಹುದು ಎಂದು ಬಣ್ಣಿಸಿದರು.ಈಗಾಗಲೇ ಕಳೆದ ಒಂದು ವರ್ಷದಿಂದ ಚಿನ್ನಾಭರಣ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಕ್ಷಯ ತೃತೀಯದಲ್ಲೂ ವ್ಯಾಪಾರ ಗಣನೀಯವಾಗಿ ಕಡಿಮೆ ಆಗಿತ್ತು. ಈ ದೃಷ್ಟಿಯಿಂದ ನೋಡುವುದಾದರೂ ಜ್ಯೂಯಲರಿ ಪಾರ್ಕ್ ಸ್ಥಾಪನೆಯೇ ಉತ್ತಮ ಪರಿಹಾರ ಎಂದು ಸಲಹೆ ನೀಡಿದರು.ಮೋದಿ ಹೇಳಿಕೆಗೆ ಶರವಣ ಸ್ವಾಗತ:
ಚಿನ್ನ ಖರೀದಿಯನ್ನು ಒಂದು ವರ್ಷ ಮುಂದಕ್ಕೆ ಹಾಕಿ ಎಂದಿರುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ದೇಶದ ಹಿತದೃಷ್ಟಿಯಿಂದ ಈ ಮಾರ್ಗ ಅನುರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಚಿನ್ನದ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ.ಎ.ಶರವಣ ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರ ಹೇಳಿಕೆ ಸರಿಯಾಗಿದೆ. ಚಿನ್ನ ಸಂಗ್ರಹ ನಿಲ್ಲಿಸಿ ಎಂಬರ್ಥದಲ್ಲಿ ಹೇಳಿದ್ದಾರೆ. ಏಕೆಂದರೆ, ಕೆಲವರು ಚಿನ್ನ ಸಂಗ್ರಹಿಸುತ್ತಾರೆ. ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಅಗತ್ಯ ಮೀರಿದ ಖರೀದಿ ನಿಲ್ಲಿಸಿ ಎಂದು ಪ್ರಧಾನಿ ಕರೆ ನೀಡಿದ್ದಾರೆ ಎಂದರು.ಪ್ರಧಾನಿ ಅವರ ಹೇಳಿಕೆಯಲ್ಲಿ ಎರಡು ಅರ್ಥವಿದೆ. ಆಭರಣಗಳ ಬಗ್ಗೆ ಅವರು ಹೇಳಿಲ್ಲ. ಬಂಡವಾಳ ಹೂಡಿಕೆ ಚಿನ್ನದ ಬಗ್ಗೆ ಹೇಳಿದ್ದಾರೆ. ಸುಮ್ಮನೆ ಚಿನ್ನ ಸಂಗ್ರಹದಿಂದ ಏನೂ ಆಗಲ್ಲ. ಅದನ್ನು ಸದ್ಯಕ್ಕೆ ಬೇಡ ಎಂದಿದ್ದಾರೆ. ಶುಭ ಸಮಾರಂಭಗಳಿಗೆ ಚಿನ್ನ ಬೇಕೇಬೇಕು. ಮದುವೆ, ನಾಮಕರಣ ಸೇರಿ ಶುಭ ಸಮಾರಂಭಗಳಿಗೆ ಚಿನ್ನ ಬೇಕೇಬೇಕು. ಇದು ನಮ್ಮ ಸಂಪ್ರದಾಯದಲ್ಲೇ ಇದೆ. ಹೀಗಾಗಿ ಬಳಕೆ ಮಾಡುವ ಚಿನ್ನ ಖರೀದಿಸಬೇಕು, ಬಂಡವಾಳ ಹೂಡಿಕೆಗೆ ಚಿನ್ನ ಖರೀದಿ ಬೇಡ ಎಂದಿದ್ದಾರೆ. ಒಳ್ಳೆಯ ಉದ್ದೇಶದಿಂದಲೇ ಅವರು ಹೇಳಿದ್ದಾರೆ ಎಂದು ತಿಳಿಸಿದರು.ನಾವು ಹೊರ ದೇಶದಿಂದ ತರುವ ಎಲ್ಲ ವಸ್ತುಗಳಿಗೂ ಡಾಲರ್ ರೂಪದಲ್ಲೇ ತೆರಿಗೆ ನೀಡುತ್ತೇವೆ. ನಾವು ಎರಡು ರೂಪದಲ್ಲಿ ಚಿನ್ನ ಖರೀದಿಸುತ್ತೇವೆ. ಒಂದು ಹೂಡಿಕೆ ರೂಪದಲ್ಲಿ ಗೋಲ್ಡ್ ಬಾರ್, ಗೋಲ್ಡ್ ಬಿಸ್ಕತ್ ಖರೀದಿಸುತ್ತೇವೆ. ಇವುಗಳ ಖರೀದಿ ಮುಂದಕ್ಕೆ ಹಾಕಬಹುದು. ಕೆಲವರು ಡಿಜಿಟಲ್ ಗೋಲ್ಡ್, ಗೋಲ್ಡ್ ಸ್ಕೀಂಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಉದ್ಯಮಕ್ಕೆ ಸಣ್ಣ ಪ್ರಮಾಣದ ಹೊಡೆತ ಆಗುತ್ತದೆ. ಆದರೆ, ದೇಶದ ಹಿತದೃಷ್ಟಿಯಿಂದ ನಾವು ಈ ಮಾರ್ಗ ಅನುಸರಿಸಬೇಕು. ಚಿನ್ನಾಭರಣ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶರವಣ ಹೇಳಿದರು.