ದೇಶದಲ್ಲಿ ಭಯೋತ್ಪಾದನೆ ನಿಗ್ರಹಿಸಿ, ಶಾಂತಿ ಸ್ಥಾಪಿಸಿದ ಪ್ರಧಾನಿ ಮೋದಿ

| Published : Feb 11 2024, 01:49 AM IST

ದೇಶದಲ್ಲಿ ಭಯೋತ್ಪಾದನೆ ನಿಗ್ರಹಿಸಿ, ಶಾಂತಿ ಸ್ಥಾಪಿಸಿದ ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ, ಭಯೋತ್ಪಾದನೆಯನ್ನು ಹತ್ತಿಕ್ಕುವ ಮೂಲಕ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲಾಗಿದೆ. ಆರ್ಥಿಕವಾಗಿ ಕಳೆದ 10 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಹತ್ತನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ಮತೊಮ್ಮೆ ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವ ಮತ್ತು ರಾಷ್ಟ್ರೀಯ ವಾದವನ್ನು ಮೊಳಗಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ, ಭಯೋತ್ಪಾದನೆಯನ್ನು ಹತ್ತಿಕ್ಕುವ ಮೂಲಕ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ನಡೆದ ಮಂಡಲ ಬಿಜೆಪಿ ನೂತನ ಪಧಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಕಳೆದ 10 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಹತ್ತನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ಮತೊಮ್ಮೆ ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವ ಮತ್ತು ರಾಷ್ಟ್ರೀಯ ವಾದವನ್ನು ಮೊಳಗಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಮೂಲಕ ಪಕ್ಷವನ್ನು ಸಂಘಟಿಸಿ ಸಂಸದ ಬಿ. ವೈ. ರಾಘವೇಂದ್ರ ಅವ ರನ್ನು ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಪಕ್ಷದ ಹುದ್ದೆಗಳು ಕೇವಲ ಅಲಂಕಾರಿಕ ಸ್ಥಾನಗಳಲ್ಲ. ಎಲ್ಲ ಆಕಾಂಕ್ಷಿಗಳಿಗೂ ಒಮ್ಮೆಲೆ ಸ್ಥಾನ ಕಲ್ಪಿಸುವುದೂ ಅಸಾಧ್ಯ. ಹೀಗಾಗಿ, ಸಂಭ್ರಮದ ನಡುವೆ ನಿರಾಸೆ ಕಂಡುಬಂದಿದ್ದು, 15 ದಿನಗಳಿಂದ ಸಂತೈಸುವ ಪ್ರಯತ್ನವೂ ನಡೆದಿದೆ. ಮಂಡಲದ ನೂತನ ಅಧ್ಯಕರಾದ ನವೀನ್ ಹೆದ್ದೂರು ಅತ್ಯಂತ ಸಮರ್ಥರಾಗಿದ್ದಾರೆ. ಕಾರ್ಯಕರ್ತರ ಜೊತೆಗೆ ಉತ್ತಮ ಸಂಪರ್ಕದೊಂದಿಗೆ ಕ್ಷೇತ್ರದ ಮೂಲೆ ಮೂಲೆಯ ಪರಿಚಯ ಹೊಂದಿದ್ದಾರೆ. ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ದುಡಿಯಬೇಕಿದೆ ಎಂದರು.

ನೂತನ ಅಧ್ಯಕ್ಷ ನವೀನ್ ಹೆದ್ದೂರು ಮಾತನಾಡಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭ ಪಕ್ಷ ನೀಡಿದ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿದೆ. ಹಿರಿಯರ ಮಾರ್ಗದರ್ಶನ ಪಡೆದು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಹಿರಿಯ ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಕೆ.ನಾಗರಾಜ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ನಾಯಕ್, ಅಶೋಕಮೂರ್ತಿ, ಸಾಲೇಕೊಪ್ಪ ರಾಮಚಂದ್ರ, ಸಿ.ಬಿ.ಈಶ್ವರ್, ಶಂಕರನಾರಾಯಣ ಐತಾಳ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪ್ರಶಾಂತ್ ಕುಕ್ಕೆ, ಕೆ.ಶ್ರೀನಿವಾಸ್ ಇದ್ದರು.

- - -

-ಫೋಟೋ:

ತೀರ್ಥಹಳ್ಳಿಯಲ್ಲಿ ಮಂಡಲ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆಯಿತು.