ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಸಚಿವ ಡಾ.ಎಚ್.ಸಿ. ಮಹದೇವಪ್ಪ

| Published : May 27 2024, 01:07 AM IST

ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಸಚಿವ ಡಾ.ಎಚ್.ಸಿ. ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದೇಶ ಭಾರತವು ಜಗತ್ತು ಕಂಡಂತಹ ಮಹಾನ್ ದೇಶವಾಗಿದ್ದು, ಈ ನೆಲದಲ್ಲಿ ಬುದ್ಧನಂತಹ ಮಹನೀಯರು ಜನಿಸಿದ್ದಾರೆ. ಬುದ್ಧ ಪ್ರಪಂಚದ ಶ್ರೇಷ್ಠ ಸಂತ. ಆತನ ಬೋಧನೆಗಳ ಕುರಿತು ವಿಶ್ವದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರು, ಮನುಕುಲದ ಉದ್ಧಾರಕ್ಕೆ ವಿಜ್ಞಾನವು ಅಗತ್ಯವಾಗಿರುವ ಹಾಗೆ ಮನುಕುಲದ ಉದ್ಧಾರಕ್ಕೆ ಬುದ್ಧನ ಉಪದೇಶಗಳೂ ಅಷ್ಟೇ ಉಪಯುಕ್ತವಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ನಮ್ಮ ದೇಶ ಭಾರತವು ಜಗತ್ತು ಕಂಡಂತಹ ಮಹಾನ್ ದೇಶವಾಗಿದ್ದು, ಈ ನೆಲದಲ್ಲಿ ಬುದ್ಧನಂತಹ ಮಹನೀಯರು ಜನಿಸಿದ್ದಾರೆ. ಬುದ್ಧ ಪ್ರಪಂಚದ ಶ್ರೇಷ್ಠ ಸಂತ. ಆತನ ಬೋಧನೆಗಳ ಕುರಿತು ವಿಶ್ವದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರು, ಮನುಕುಲದ ಉದ್ಧಾರಕ್ಕೆ ವಿಜ್ಞಾನವು ಅಗತ್ಯವಾಗಿರುವ ಹಾಗೆ ಮನುಕುಲದ ಉದ್ಧಾರಕ್ಕೆ ಬುದ್ಧನ ಉಪದೇಶಗಳೂ ಅಷ್ಟೇ ಉಪಯುಕ್ತವಾಗಿವೆ ಎಂದು ಹೇಳುತ್ತಾರೆ. ಮನುಕುಲದ ಉದ್ಧಾರಕ್ಕಾಗಿ ಬಂದ ಬುದ್ಧ ಸ್ವಾರ್ಥಿಯಾಗದೇ ಮನುಷ್ಯರೆಲ್ಲರೂ ಸಮಾನರು ಎಂದು ಹೇಳಿ ಜಗದ ಕಣ್ಣು ತೆರೆಸಿದಾತ. ಎಲ್ಲರೂ ಆತನನ್ನು ದೇವರೆಂದು ಕರೆದರೂ ಕೂಡಾ ಆ ಕೂಗನ್ನು ಬದಿಗೊತ್ತಿ ಬಹಳಷ್ಟು ಸರಳವಾಗಿ ಜೀವಿಸಿದ್ಧ ಮಹಾವ್ಯಕ್ತಿ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.

ಸ್ವತಃ ಗೌತಮ ಬುದ್ಧರೇ, ಎಷ್ಟೋ ಸಲ ಮಾತನಾಡುತ್ತಾ, ನಾನು ದೇವರೂ ಅಲ್ಲ, ದೇವದೂತನೂ ಅಲ್ಲ ಮಂತ್ರವಾದಿಯೂ ಅಲ್ಲ, ನಾನೂ ಕೂಡಾ ನಿಮ್ಮಂತೆಯೇ ಒಬ್ಬ ಮಹಾನ್ ವ್ಯಕ್ತಿ ಎಂದು ಅವರು ಹೇಳಿದ್ದರು. ಇದರ ಜೊತೆಗೆ ಬುದ್ಧನ ಬೋಧನೆಗಳೂ ಮೌಢ್ಯಕ್ಕೆ ವಿರುದ್ಧವಾಗಿ, ವೈಚಾರಿಕತೆಯ ಸಂದೇಶವನ್ನು ಸಾರುವಂತಹ ನಿಟ್ಟಿನಲ್ಲೇ ಸದಾ ಇವೆ. ಇಂತಹ ಬುದ್ಧ ಹುಟ್ಟಿದ ನಾಡಿನಲ್ಲಿ, ವಿಜ್ಞಾನ ತಂತ್ರಜ್ಞಾನವು ಇಷ್ಟೊಂದು ಮುಂದುವರೆದ ಕಾಲದಲ್ಲಿ ಪ್ರಧಾನಿ ಆಗಿರುವ ಮೋದಿ ಅವರು ತಾನೊಬ್ಬ ದೇವದೂತ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಜನರಿಗೆ ನಿರಂತರವಾಗಿ ಸಹಾಯ ಮಾಡಿ ಅವರಿಂದಲೇ ಭಗವಾನ್ ಎಂದು ಕರೆಸಿಕೊಂಡ ಗೌತಮ ಬುದ್ಧರೇ ತನ್ನನ್ನು ತಾನು ಎಲ್ಲರಂತೆಯೇ ಸಾಮಾನ್ಯ ಎಂದು ಹೇಳಿಕೊಂಡಿರುವಾಗ, ಜನರ ಬದುಕಿಗೆ ಎಲ್ಲಾ ರೀತಿಯಲ್ಲೂ ತೊಂದರೆ ಉಂಟು ಮಾಡಿ, ಅಸಮಾತೆಯ ಸಮಾಜದ ನಿರ್ಮಾಣದ ದಿಕ್ಕಿನೆಡೆ ಆಡಳಿತ ನಡೆಸಿರುವ ಮೋದಿಯವರು ತಮ್ಮನ್ನು ತಾವೇ ದೇವದೂತ ಎನ್ನುತ್ತಿರುವುದು ಮೂಢನಂಬಿಕೆಯ ಸಮಾಜದ ನಿರ್ಮಾಣದ ಸ್ಪಷ್ಟ ಹೆಜ್ಜೆ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು, ದೇವದೂತರಲ್ಲ ಎಂಬುದನ್ನು ಅಧಿಕಾರದ ಕೊನೆಯ ಹಂತದಲ್ಲಿರುವ ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕು. ಇನ್ನೂ ವಿದೇಶಕ್ಕೆ ಹೋದಾಗಲೆಲ್ಲಾ ತಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ಪ್ರಧಾನಿಗಳು, ಬುದ್ಧ ಹೇಳಿದ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು. ಇಲ್ಲದೇ ಇದ್ದಾಗ ಇಂತಹದ್ದೇ ಅರ್ಥವಿಲ್ಲದ, ಮೂಢನಂಬಿಕೆಯ ಮಾತುಗಳನ್ನೇ ಜನರು ಕೇಳಬೇಕಾಗುತ್ತದೆ. ಸಮಾನತೆ , ಸಾಮರಸ್ಯ ಮತ್ತು ಸೌಹಾರ್ದತೆಯ ಶತ್ರುವಾದ ಮೂಢನಂಬಿಕೆಯ ಮಾತುಗಳು ಪ್ರಜಾಪ್ರಭುತ್ವದ ಶತ್ರುಗಳು ಎಂದು ಅವರು ತಿಳಿಸಿದ್ದಾರೆ.