ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಶಾಲಾ ಮಕ್ಕಳನ್ನು ಶೌಚ ಗುಂಡಿಗಿಳಿಸಿ ಸ್ವಚ್ಛತಾ ಕಾರ್ಯಕ್ಕೆ ಬಳಸಿದ ಅಮಾನವೀಯ ಘಟನೆ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಾಂಶುಪಾಲೆ ಸೇರಿ ನಾಲ್ವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸೇರಿ ವಿವಿಧ ಅಧಿಕಾರಿಗಳು ಭಾನುವಾರ ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಶಾಲಾ ಸಿಬ್ಬಂದಿಯನ್ನುತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಐದಾರು ಮಕ್ಕಳ ಬಳಕೆ:ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಏಳರಿಂದ ಎಂಟನೇ ತರಗತಿಯ ಐದಾರು ಮಕ್ಕಳನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛತಾ ಕಾರ್ಯಕ್ಕೆ ಬಳಸಲಾಗಿತ್ತು. ಇಂಥ ಕೆಲಸಕ್ಕೆ ಬಳಸಿದ ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಪ್ರಾಂಶುಪಾಲರ ಎದುರೇ ಮಕ್ಕಳನ್ನು ಈ ರೀತಿಯ ಕೆಲಸಕ್ಕೆ ಬಳಸಿದ ದೃಶ್ಯವನ್ನು ಕೆಲ ಶಿಕ್ಷಕರು ವಿಡಿಯೋ ಮಾಡಿದ್ದು, ಅದೀಗ ಬಹಿರಂಗವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‘ಮಲದ ಗುಂಡಿಯೊಳಗೆ ಇಳಿಸಿ ಕಸ ತೆಗೆಸಿದರು. ನಾವು ಬಕೆಟ್‌ನಲ್ಲಿ ಕಸ ತುಂಬಿ ಕೊಟ್ಟೆವು. ಕೆಲವರು ಮೇಲಿಂದ ನೀರು ಹಾಕಿದರು. ಐದಾರು ಮಕ್ಕಳಿದ್ದೆವು’ ಎಂದು ವಿಡಿಯೋದ ಮುಂದೆ ಹೇಳಿಕೊಂಡಿರುವ ಮಕ್ಕಳು, ಇಲ್ಲಿ ವಿಪರೀತ ಹಿಂಸೆ ಕೊಡುತ್ತಾರೆ ಎಂದು ನೋವು ತೋಡಿಕೊಂಡಿದ್ದಾರೆ.
ನಾಲ್ವರ ಅಮಾನತು:ಮಕ್ಕಳನ್ನು ಮಲದ ಗುಂಡಿ ಸ್ವಚ್ಛಗೊಳಿಸಿದ ಆರೋಪದ ಮೇರೆಗೆ ವಸತಿ ಶಾಲೆ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಮುನಿಯಪ್ಪ, ಅತಿಥಿ ಶಿಕ್ಷಕ ಅಭಿಷೇಕ್ ಮತ್ತು ವಾರ್ಡನ್ ಮಂಜುನಾಥ್ ಅವರನ್ನು ಭಾನುವಾರ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಈ ನಡುವೆ, ಘಟನೆ ಕುರಿತು ಮಾಧ್ಯಮದಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್.ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಂಶುಪಾಲೆ ಭಾರತಮ್ಮ ಸೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಭೇಟಿ ವೇಳೆ ಅಲ್ಲೇ ಇದ್ದ ಪೋಷಕರು ವಸತಿ ಶಾಲೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಜಡ್ಜ್ ಭೇಟಿ:ಶಾಲೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶರಾದ ಸುನಿಲ್ ಕುಮಾರ್ ಅವರೂ ಭೇಟಿ ನೀಡಿ ವಸತಿ ನಿಲಯದ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಅಲ್ಲಿನ ಸಮಸ್ಯೆಗಳ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದ ನಂತರ ಹಾಸ್ಟೆಲ್‌ನ ಅಡುಗೆ ಕೋಣೆ, ಮಕ್ಕಳ ವಾಸ್ತವ್ಯ ಕೊಠಡಿ ಸೇರಿ ಎಲ್ಲಡೆ ಪರಿಶೀಲನೆ ಮಾಡಿದರು. ಈ ವೇಳೆ ತಮಗೆ ವಯರ್‌ನಿಂದ ಹೊಡೆಯುತ್ತಾರೆ, ಸರಿಯಾಗಿ ಊಟ ಕೊಡುವುದಿಲ್ಲ, ಶೌಚದ ಪಿಟ್ ಕ್ಲೀನ್ ಮಾಡಿಸಿದ್ದಾರೆ ಎಂದು ಮಕ್ಕಳು ನ್ಯಾಯಾಧೀಶರ ಮುಂದೆ ನೋವು ತೋಡಿಕೊಂಡರು.6ರಿಂದ 10ನೇ ತರಗತಿಯ 250 ಮಕ್ಕಳು ಈ ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್‌ಗೆ ಇಲ್ಲೇ ವಸತಿ ವ್ಯವಸ್ಥೆ ಇದೆ. ಆದರೂ ವಾರ್ಡನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.