ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ ಮಾಹಿತಿ ಕಡ್ಡಾಯ

| Published : Mar 06 2024, 02:18 AM IST

ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ ಮಾಹಿತಿ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭೆ ಚುನಾವಣೆ ನೀತಿ ಸಂಹಿತೆ ಕುರಿತ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಪ್ರತಿಯೊಂದು ಮುದ್ರಣಾಲಯಗಳು ಪ್ರಜಾಪ್ರತಿನಿಧಿ ಕಾಯ್ದೆ 127-ಎ ವಿಧಿಯಡಿ ಚುನಾವಣಾಧಿಕಾರಿಯಿಂದ ಚುನಾವಣಾ ಪ್ರಚಾರ ಸಾಮಾಗ್ರಿಗಳ ಮುದ್ರಣದ ಕುರಿತು ನಿಗದಿತ ಅಪೆಂಡಿಕ್ಸ್-ಎ ನಲ್ಲಿ ಮಾಹಿತಿ ನೀಡುವುದು ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುದ್ರಣಾಲಯ ಮಾಲೀಕರು ಹಾಗೂ ದೂರಸಂಪರ್ಕ ಸಂಸ್ಥೆಯ ಪ್ರತಿನಿಧಿಗಳೊಂದಿಗಿನ ಮಾದರಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1951ರ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಮುದ್ರಣಾಲಯಗಳ ಕಾರ್ಯವೈಖರಿ ಬಗ್ಗೆ ತಿಳಿಸಲಾಗಿದೆ. ಚುನಾವಣಾ ಪ್ರಚಾರ ಸಾಮಾಗ್ರಿಗಳ ಮುದ್ರಣದ ಕುರಿತು ಅಪೆಂಡಿಕ್ಸ್-ಎ ನಲ್ಲಿ ಡಿಕ್ಲರೇಷನ್ ಮಾಡಿ, ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದ್ದು, ಎಲ್ಲ ಮುದ್ರಕರು ತಪ್ಪದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.

ಪ್ರತಿ ಕರಪತ್ರ, ಭಿತ್ತಿ ಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣಾಲಯದ ಹೆಸರು ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ವಿವರವನ್ನು ನಮೂದಿಸುವುದು ಕಡ್ಡಾಯ. ಮುದ್ರಣಾಲಯದ ಮಾಲೀಕರು ಕಡಿಮೆ ದರ ನಮೂದಿಸುವುದು, ವೆಚ್ಚ ಕಡಿಮೆ ತೋರಿಸುವುದು, ಹೆಚ್ಚು ಪ್ರತಿಗಳನ್ನು ಮುದ್ರಿಸಿ, ಕಡಿಮೆ ಸಂಖ್ಯೆಯನ್ನು ನಮೂದಿಸುವುದು ಅಪರಾಧವಾಗುತ್ತದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ವಿವಿಧ ಮುದ್ರಣ ಸಾಮಾಗ್ರಿಗಳ ಮುದ್ರಣಕ್ಕೆ ತಗಲುವ ವೆಚ್ಚದ ಪಟ್ಟಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ನಿಯಮಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ, ಅರಿವು ಮೂಡಿಸಲಾಗಿದೆ. ಹೀಗಾಗಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಮಾಸ್ಟರ್ ತರಬೇತುದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಮುದ್ರಣ ಮಾಡುವ ಸಂದರ್ಭದಲ್ಲಿ ಪ್ರಕಾಶಕರು ಯಾವುದೇ ಅಭ್ಯರ್ಥಿ, ರಾಜಕೀಯ ಪಕ್ಷ ಹಾಗೂ ಸಂಸ್ಥೆಗೆ ಸಂಬಂಧಪಟ್ಟಂತೆ ಮುದ್ರಣಾ ಸಾಮಗ್ರಿಯನ್ನು ಮುದ್ರಣ ಮಾಡುವುದಕ್ಕಿಂತ ಮುಂಚಿತವಾಗಿ ಅಪೆಂಡಿಕ್ಸ್-ಎ ಡಿಕ್ಲರೇಷನ್ ಅನ್ನು ಕಡ್ಡಾಯವಾಗಿ ಕೊಡಬೇಕು. ಯಾವುದೇ ಕಾರಣಕ್ಕೂ ಪ್ರಭಾವ, ಒತ್ತಡಕ್ಕೆ ಮಣಿದು ಅನಧಿಕೃತ ಮುದ್ರಣ ಕಾರ್ಯಕ್ಕೆ ಯಾರೂ ಕೂಡ ಮುಂದಾಗಬಾರದು ಎಂದು ಹೇಳಿದರು.

ಮೊಳಕಾಲ್ಮುರು ತಾಲೂಕಿನ ಕೆಲವು ಗ್ರಾಮಗಳು ಹಾಗೂ ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ಕೆಲವು ಗ್ರಾಮಗಳು ಹಾಗೂ ಹೊಸದುರ್ಗ ಹಾಗೂ ಹಿರಿಯೂರು ಭಾಗದ ಗಡಿಗಳಲ್ಲಿ ನೆಟ್‍ವರ್ಕ್ ಸಮಸ್ಯೆ ಇದ್ದು ಇಂತಹ ಕಡೆ ಸಿಗ್ನಲ್‍ಗಾಗಿ ಟವರ್ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ದೂರಸಂಪರ್ಕ ಪ್ರತಿನಿಧಿಗಳಿಗೆ ಸೂಚನೆ ನೀಡಿದರು. ನೆಟ್‍ವರ್ಕ್ ಸಮಸ್ಯೆ ಇರುವ ಮತಗಟ್ಟೆವಾರು ಗ್ರಾಮಗಳ ಪಟ್ಟಿಯನ್ನು ದೂರಸಂಪರ್ಕ ಪ್ರತಿನಿಧಿಗಳು ಪಡೆದು, ಮುಂದಿನ ವಾರದೊಳಗೆ ನೆಟ್‍ವರ್ಕ್ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಕಮ್ಯೂನಿಕೇಷನ್ ಪ್ಲಾನ್ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು.