ಪ್ರಿಂಟರ್ ಕಳ್ಳನ ಬಂಧನ: ₹ 6.32 ಲಕ್ಷ ಮೌಲ್ಯದ ಮಾಲು ವಶ

| Published : Jun 30 2024, 12:56 AM IST

ಸಾರಾಂಶ

ಕಡೂರು, ಸರ್ಕಾರಿ ಕಚೇರಿಗಳಲ್ಲಿ ಪ್ರಿಂಟರ್ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಸುಮಾರು ₹ 6.32 ಲಕ್ಷ ಮೌಲ್ಯದ ಪ್ರಿಂಟರ್ ಗಳ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕಡೂರು.

ಸರ್ಕಾರಿ ಕಚೇರಿಗಳಲ್ಲಿ ಪ್ರಿಂಟರ್ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಸುಮಾರು ₹ 6.32 ಲಕ್ಷ ಮೌಲ್ಯದ ಪ್ರಿಂಟರ್ ಗಳ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಅಮ್ಮಸಂದ್ರದ ಆಕಾಶ್ ಬಂಧಿತ ಆರೋಪಿ. ಈತ ಇತ್ತೀಚೆಗೆ ಕಡೂರು ಟೌನ್ ಮೆಸ್ಕಾಂ ಕಚೇರಿಯಲ್ಲಿ 3 ಪ್ರಿಂಟರ್ ಗಳ ಕಳುವಾಗಿದ್ದ ಬಗ್ಗೆ ಕಡೂರು ಠಾಣೆಯಲ್ಲಿ ದಾಖಲಾಗಿತ್ತು ಆರೋಪಿ ಪತ್ತೆಗಾಗಿ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಡೂರು ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತನಿಖೆ ಕೈಗೊಂಡ ಪಿಎಸ್ಐ ನವೀನ್ ಎನ್.ಪಿ. ಹಾಗೂ ಸಿಬ್ಬಂದಿ ಆರೋಪಿಯನ್ನು ಖಚಿತ ಮಾಹಿತಿ ಪಡೆದು ಜೂನ್ 28 ರ ಬೆಳಗ್ಗೆ ಕಡೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, ಆತನ ಕ್ಯಾರಿ ಬ್ಯಾಗ್ ನಲ್ಲಿದ್ದ ಒಂದು ಪ್ರಿಂಟರ್ ನ್ನು ವಶಕ್ಕೆ ಪಡೆದಿದ್ದರು.

ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಆಕಾಶ್ ಬಿನ್ ಸುಭಾಷ್, ಎನ್.ಜಿ.ಓದಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದು, ಕಡೂರು ಪಟ್ಟಣದ ಮೆಸ್ಕಾಂ ಕಚೇರಿ, ಬಾಲಕಿಯರ ಜೂನಿಯರ್ ಕಾಲೇಜು, ಅಜ್ಜಂಪುರ ತಾಲೂಕು ಕಚೇರಿ, ಬೀರೂರು ಟೌನ್ ಬಿಇಓ. ಕಚೇರಿ, ಜೂನಿಯರ್ ಕಾಲೇಜು, ಮುನ್ಸಿಪಲ್ ಕಚೇರಿ ಹಾಗೂ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ, ಗುಬ್ಬಿ ಕೋರ್ಟ್, ತಾಲೂಕು ಕಚೇರಿ, ತಿಪಟೂರು ತಾಲೂಕು ಕಚೇರಿ,ಬೆಸ್ಕಾಂ, ನಿಟ್ಟೂರು ಗ್ರಾಪಂ, ಹಾಸನದ ಅರಸೀಕೆರೆ ತಾಲೂಕು ಕಚೇರಿ, ಮಧುಗಿರಿ, ಕೊರಟಗೆರೆ, ಶಿರಾ-ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ, ಪಾಂಡವಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಣಿಗಲ್, ನೆಲಮಂಗಲ ಮತ್ತು ಇತರೆ ಸರ್ಕಾರಿ ಕಚೇರಿಗಳಲ್ಲಿ 79 ಕ್ಕೂ ಹೆಚ್ಚು ಪ್ರಿಂಟರ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಆರೋಪಿಯಿಂದ ವಶಪಡಿಸಿಕೊಂಡ 79 ಪ್ರಿಂಟರ್‌ಗಳ ಒಟ್ಟು ಮೌಲ್ಯ ಸುಮಾರು 6.32 ಲಕ್ಷ ರು. ಗಳಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಂಡದ ಪಿಎಸ್ಐ ಗಳಾದ ನವೀನ್ ಎನ್.ಪಿ, ಪವನ್ ಕುಮಾರ್ ಸಿ.ಸಿ., ಸಿಬ್ಬಂದಿ ಮಂಜುನಾಥ ಸ್ವಾಮಿ, ಕುಚೇಲ, ಸ್ವಾಮಿ ಎ.ಓ, ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲ ನಾಯ್ಕ, ಜಯಮ್ಮ, ರೇಣುಕಾ ಪ್ರಸಾದ್, ನಯಾಜ್ ಅಂಜುಮ್ ಮತ್ತು ಅಬ್ದುಲ್ ರಬ್ಬಾನಿ ಇದ್ದು, ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ವರಿಷ್ಟಾಧಿಕಾರಿ ಬಹುಮಾನ ಘೋಷಿಸಿದ್ದಾರೆ.29ಕೆಕೆಡಿಯು1.

ಪ್ರಿಂಟರ್ ಗಳನ್ನು ಕಳವು ಮಾಡುತಿದ್ದ ಆರೋಪಿ ಆಕಾಶ್ ನನ್ನು ಕಡೂರು ಪೋಲೀಸರು ಮಾಲುಗಳ ಸಮೇತ ಬಂಧಿಸಿರುವುದು.