ಕುಡಿವ ನೀರು ಸಮರ್ಪಕ ಪೂರೈಕೆಗೆ ಆದ್ಯತೆ ನೀಡಿ

| Published : May 10 2024, 01:38 AM IST

ಸಾರಾಂಶ

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಪರಿಸ್ಥಿತಿಗೆ ಅನುಗುಣವಾಗಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಪೂರೈಸಬೇಕು.

ಗದಗ:

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಅಧಿಕಾರಿ ವರ್ಗ ಪ್ರಥಮಾದ್ಯತೆ ನೀಡಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಿಲ್ಲೆಯಲ್ಲಿ ಕುಡಿಯುವ ನೀರು ನಿರ್ವಹಣೆ, ಮೇವಿನ ಪೂರೈಕೆ ಕುರಿತು ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಪರಿಸ್ಥಿತಿಗೆ ಅನುಗುಣವಾಗಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಪೂರೈಕೆಗೆ ಮುಂದಾಗಬೇಕು. ಜಲಮೂಲಗಳ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಸುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ವಾರು ನೀರು ಪೂರೈಕೆ ಕುರಿತು ಹಾಗೂ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಗಮನ ಹರಿಸಿ ಕೂಡಲೇ ಸ್ಪಂದಿಸಿ ಕುಡಿಯುವ ನೀರಿನ ವ್ಯವಸ್ಥಿತ ಸರಬರಾಜಿಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ಧೋರಣೆ ಸಹಿಸಲಾಗದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜನ ಸಾಮಾನ್ಯರಿಗೆ ದೈನಂದಿನ ಬಳಕೆಗೆ ಹಾಗೂ ಕುಡಿಯಲು ಅಗತ್ಯವಿರುವ ನೀರು ಪೂರೈಕೆ ಜವಾಬ್ದಾರಿಯನ್ನು ಸರಿಯಾಗಿ ಅಧಿಕಾರಿ ವರ್ಗ ಮಾಡಬೇಕು. ಮೊದಲು ಸರ್ಕಾರಿ ವ್ಯಾಪ್ತಿಯ ಬೋರ್‌ವೆಲ್‌ಗಳನ್ನು ನೀರು ಪೂರೈಕೆಗೆ ಬಳಕೆ ಮಾಡಿಕೊಳ್ಳಬೇಕು. ಸಿಗದಿದ್ದಲ್ಲಿ ಖಾಸಗಿ ಒಡೆತನದ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಲು ಆದ್ಯತೆ ನೀಡುವಂತೆ ತಿಳಿಸಿದರು.

ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಬೋರ್‌ವೆಲ್‌ಗಳು ಸಿಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅಧಿಕಾರಿ ವರ್ಗ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ಗ್ರಾಮೀಣ ಭಾಗದ ಜಾನುವಾರುಗಳಿಗೆ ಮೇವು ಪೂರೈಕೆ ಸರಿಯಾಗಿ ಆಗಲಿ. ಸಾರ್ವಜನಿಕರಿಗೆ ಅಗತ್ಯಕ್ಕೆ ತಕ್ಕಂತೆ ನೀರಿನ ಇತರ ಮೂಲಗಳನ್ನು ಬಳಕೆ ಮಾಡಿಕೊಂಡು ನೀರು ಪೂರೈಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ಹಲವು ಕಡೆ ಖುದ್ದಾಗಿ ಭೇಟಿ ಪರಿಶೀಲಿಸಲಾಗುತ್ತಿದೆ. ತಾಪಂ ಇಒಗಳು ಕುಡಿಯುವ ನೀರು ಪೂರೈಕೆ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್.ಆರ್. ಗೌಡರ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.