ಸಾರಾಂಶ
ಶಾಲಾ, ಕಾಲೇಜು, ದೇವಸ್ಥಾನ, ಸಮುದಾಯ ಕೇಂದ್ರಗಳು ಸೇರಿ ಜನನೀಬಿಡ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ
ಗಜೇಂದ್ರಗಡ: ನಾವು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರಬೇಕಾದರೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿದಿನ ಸ್ವಚ್ಛತೆ ಎಂಬುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಪುರಸಭೆ ಆರೋಗ್ಯ ವಿಭಾಗದ ರಾಘವೇಂದ್ರ ಮಂತಾ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ಮಿಷನ್, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಕಾರ್ಯಾಲಯದಿಂದ ಶನಿವಾರ ನಡೆದ ಸ್ವಚ್ಛತಾ ಹೀ ಸೇವಾ ಅಡಿ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಅಭಿಯಾನ ನಿಮಿತ್ತ ನಡೆದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಟ್ಟಣದಲ್ಲಿ ಸೆ. ೧೭ ರಿಂದ ಅ. ೨ರವೆರೆಗ ನಡೆಯುವ ಸ್ವಚ್ಛತಾ ಹೀ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪರಿಸರ ಸ್ವಚ್ಛವಾಗಿದ್ದರೆ, ಆರೋಗ್ಯವಂತವಾಗಿ ಇರಲು ಸಾಧ್ಯವಿದೆ. ಹೀಗಾಗಿ ನಾವು ವಾಸಿಸುವ ಮತ್ತು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಅದರಲ್ಲೂ ಶಾಲಾ, ಕಾಲೇಜು, ದೇವಸ್ಥಾನ, ಸಮುದಾಯ ಕೇಂದ್ರಗಳು ಸೇರಿ ಜನನೀಬಿಡ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಶ್ರೇಯಾ ರಾಯಬಾಗಿ ಪ್ರಥಮ ಸ್ಥಾನ, ನವ್ಯಾ ರಾಯಬಾಗಿ ದ್ವಿತೀಯ ಹಾಗೂ ವೀಣಾ ಶಾಬಾದಿ ತೃತೀಯ ಸ್ಥಾನ ಪಡೆದರು.ಇದಕ್ಕೂ ಮುನ್ನ ಪುರಸಭೆ ಅಧಿಕಾರಿ ಶಿವಕುಮಾರ ಇಲಾಳ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಶಿಕ್ಷಕರಾದ ಡಿ.ಆರ್. ಮ್ಯಾಗೇರಿ, ಐ.ಎಸ್. ಬದಾಮಿ, ಹನಮಂತ ಭಜಂತ್ರಿ, ಎ.ಜಿ. ಬೂದಿಹಾಳ, ಎ.ಎನ್. ರೋಣದ, ಎಸ್.ಡಿ. ಕುರಿ, ಆರ್.ಎಸ್. ಶೃಂಗರಾಪುರ, ಸುರೇಶ ಮಹೇಂದ್ರಕರ ಹಾಗೂ ಮೈಬು ಚಾಮಲಾಪೂರ ಸೇರಿ ಇತರರು ಇದ್ದರು.