ಬಸ್‌ ನಿಲ್ದಾಣ, ಘಟಕಗಳ ಸ್ವಚ್ಛತೆಗೆ ಆದ್ಯತೆ ನೀಡಿ

| Published : Jun 13 2024, 12:49 AM IST

ಸಾರಾಂಶ

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ಹೀಗಾಗಿ ಮತ್ತೆ ಇತ್ತ ಕಡೆ ಬರಲು ಅಧ್ಯಕ್ಷರಾಗಿ ಸಾಧ್ಯವಾಗಿರಲಿಲ್ಲ.

ಹುಬ್ಬಳ್ಳಿ:

ವಾಯವ್ಯ ಸಾರಿಗೆ ಸಂಸ್ಥೆಯಲ್ಲಿನ ಎಲ್ಲ ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಓಡಿಸಬೇಕು. ಪ್ರತಿ ಘಟಕ, ಬಸ್‌ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ನಿಗಮದ ಅಧ್ಯಕ್ಷ ರಾಜು (ಭರಮಗೌಡ) ಕಾಗೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಸ್ಥೆಯ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಸೂಚನೆ ನೀಡಿದರು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ಹೀಗಾಗಿ ಮತ್ತೆ ಇತ್ತ ಕಡೆ ಬರಲು ಅಧ್ಯಕ್ಷರಾಗಿ ಸಾಧ್ಯವಾಗಿರಲಿಲ್ಲ. ಇದೀಗ ನೀತಿ ಸಂಹಿತೆ ಮುಗಿದ ಕಾರಣ ಹುಬ್ಬಳ್ಳಿಗೆ ಆಗಮಿಸಿ ಸಭೆ ನಡೆಸಿ ಕೆಲವೊಂದಿಷ್ಟು ಸಲಹೆ ಸೂಚನೆ ನೀಡಿದರು.

ಬಸ್‌ ನಿಲ್ದಾಣ, ಘಟಕಗಳಲ್ಲಿ ಸ್ವಚ್ಛ ಕೊರತೆ ಎದ್ದುಕಾಣುತ್ತದೆ ಎಂಬ ಆರೋಪ ಮಾಮೂಲಿಯಾಗಿದೆ. ಆದಕಾರಣ ಸ್ವಚ್ಛತೆ ಕುರಿತು ದೂರು ಬಾರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಳಿಕ ಹುಬ್ಬಳ್ಳಿ ಗ್ರಾಮಾಂತರ ಘಟಕ-1, ಹೊಸೂರ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನಿಲ್ದಾಣದಲ್ಲಿ ಮೂಲಸೌಲಭ್ಯ ಕಲ್ಪಿಸಬೇಕು. ಪ್ರಯಾಣಿಕ ಸ್ನೇಹಿ ನಿಲ್ದಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೇಳೆ ವಿದ್ಯಾರ್ಥಿಗಳ ಬಸ್‌ಪಾಸ್‌ ವಿತರಣೆ ಕೌಂಟರ್‌ಗೆ ಭೇಟಿ ನೀಡಿ ಕೆಲ ವಿದ್ಯಾರ್ಥಿಗಳಿಗೆ ತಾವೇ ಪಾಸ್‌ ವಿತರಿಸಿದರು. ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ರಾಜೇಶ ಹುದ್ದಾರ, ಬಿ. ಬೋರಯ್ಯ, ಪಿ.ವೈ. ನಾಯಕ, ವಿಜಯಶ್ರೀ ನರಗುಂದ, ಮಾಲತಿ ಎಸ್.ಎಸ್, ಜಗದಂಬಾ ಕೋರ‍್ಡೆ, ಇಸ್ಮಾಯಿಲ್ ಕಂದಗಲ್, ದಿವಾಕರ ಯರಗೊಪ್ಪ, ಸತೀಶರಾಜು ಜೆ, ಎಂ.ಬಿ. ಕಪಲಿ ಹಾಗೂ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ, ವಿಭಾಗೀಯ ಸಂಚಾರಾಧಿಕಾರಿ ಕೆ.ಎಲ್. ಗುಡೆನ್ನವರ ಮತ್ತು ರವಿ ಅಂಚಿಗಾವಿ ಸೇರಿದಂತೆ ಹಲವರಿದ್ದರು.