ಸಾರಾಂಶ
ಶಿರಹಟ್ಟಿ: ಮಾನವನ ದೇಹದಲ್ಲಿರುವ ಪಂಚೇಂದ್ರಿಯಗಳಲ್ಲಿ ಅತ್ಯಂತ ಮಹತ್ವವಾದ ಅಂಗ ಕಣ್ಣು. ಕಣ್ಣು ಇದ್ದರೆ ಸುಂದರವಾದ ಪ್ರಪಂಚವನ್ನು ನೋಡಲು ಸಾಧ್ಯ. ಆದ್ದರಿಂದ ನಾವು ಕಣ್ಣುಗಳನ್ನು ಬಹಳ ಸುರಕ್ಷತೆಯಿಂದ ನೋಡಿಕೊಳ್ಳಬೇಕು ಎಂದು ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹೇಳಿದರು.
ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ತಿಮ್ಮರಡ್ಡಿ ಪಾ. ಮರಡ್ಡಿ ಸ್ನೇಹ ಬಳಗ, ಬೆಳ್ಳಟ್ಟಿಯ ಪ್ರಜಾ ಚೈತನ್ಯ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ತಿಮ್ಮರಡ್ಡಿ ಮರಡ್ಡಿ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಕಣ್ಣಿನ ಇತರ ತೊಂದರೆಗಳಿಗೆ ಚಿಕಿತ್ಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಹವನ್ನು ಎಷ್ಟು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ಕಣ್ಣುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಆರಂಭವಾದಾಗಿನಿಂದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ದೃಷ್ಣಿ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಮನುಷ್ಯನ ಜೀವನ ಮತ್ತೊಬ್ಬರ ಬಾಳು ಬೆಳಗುವಂತಿರಬೇಕು. ಜೀವಿತಾವಧಿಯಲ್ಲಿ ಪರಸ್ಪರ ಸಹಾಯ-ಸಹಕಾರ ಮಾಡಬೇಕು. ಎಲ್ಲರಿಗೂ ಕಣ್ಣು ಅತ್ಯಂತ ಅವಶ್ಯಕವಾದ ಅಂಗವಾಗಿದ್ದರಿಂದ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ವೈದ್ಯರು ನೀಡಿದ ಮಾಹಿತಿ ಪ್ರಕಾರ ಸಕ್ಕರೆ ಕಾಯಿಲೆ ಹೊಂದಿದವರು, ಶಾಲಾ ಮಕ್ಕಳು ಕಡ್ಡಾಯವಾಗಿ ಕಣ್ಣಿನ ಸುರಕ್ಷತೆ ದೃಷ್ಟಿಯಿಂದ ಪರೀಕ್ಷಿಸಿಕೊಳ್ಳಬೇಕು. ಊಟದಲ್ಲಿ ಹಸಿರು ತರಕಾರಿ, ಹಳದಿ ಮತ್ತು ಕೆಂಪು ಹಣ್ಣು ಸೇರಿದಂತೆ ಹೆಚ್ಚಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಹೇಳಿದರು.ಬೆಳ್ಳಟ್ಟಿ ಗ್ರಾಪಂ ಸದಸ್ಯ ಮೋಹನ್ ಗುತ್ತೆಮ್ಮನವರ ಮಾತನಾಡಿ, ಬದುಕು ಸಾರ್ಥಕತೆ ಪಡೆಯಬೇಕಾದರೆ ದಾನ-ಧರ್ಮ ಕಾರ್ಯದಲ್ಲಿ ತೊಡಗಬೇಕು. ನೇತ್ರದಾನ ಅತ್ಯಂತ ಶ್ರೇಷ್ಠವಾಗಿದ್ದು, ಅದು ಅಂಧತ್ವದಲ್ಲಿರುವವರಿಗೆ ಬೆಳಕು ತೋರುವ ಪವಿತ್ರ ಕಾರ್ಯವಾಗಿದೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆ ದುಡಿಮೆ, ಗಳಿಕೆ ಜತೆಗೆ ಸಮಾಜದಲ್ಲಿನ ಅಸಹಾಯಕರ, ಬಡವರ, ನಿರ್ಗತಿಕರ, ಆನಾರೋಗ್ಯ ಪೀಡಿತರ ಧ್ವನಿಯಾಗಬೇಕು. ಯುವಕರು ಮೊದಲು ಆರೋಗ್ಯವಂತರಾಗಬೇಕು. ಅಂದಾಗ ಮಾತ್ರ ಅವರು ಸಮಾಜದ ಸೇವೆ ಮಾಡಲು ಸಾಧ್ಯ. ಅಧಿಕಾರ, ಸಂಪತ್ತು ಶಾಶ್ವತವಲ್ಲ. ಪ್ರತಿಯೊಬ್ಬರಲ್ಲೂ ಮಾನವೀಯತೆ ಗುಣ ಮುಖ್ಯವಾಗುತ್ತದೆ ಎಂದು ಹೇಳಿದರು.೪೦ ವಯಸ್ಸಿನ ನಂತರ ಕಣ್ಣಿನ ಸಮಸ್ಯೆಗಳು ಉಂಟಾಗುವುದು ಸಹಜವಾಗಿದೆ. ಆದರೆ ಅದು ಕೆಲವರಿಗೆ ಗೊತ್ತಾಗುವುದಿಲ್ಲ. ಇದರಿಂದ ದೃಷ್ಟಿಯಲ್ಲಿ ದೋಷ ಕಂಡುಬರುತ್ತದೆ. ವೈದರ ಸಲಹೆಯಂತೆ ಅಪಾಯಕಾರಿ ಕೆಲಸದ ಸಮಯದಲ್ಲಿ ಸುರಕ್ಷತಾ ಕನ್ನಡಕಗಳನ್ನು ಬಳಸಬೇಕು. ಕಣ್ಣಿನ ಆರೋಗ್ಯಕ್ಕೆ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಕಣ್ಣುಗಳನ್ನು ಉಜ್ಜುವ ಮೊದಲು ಅಥವಾ ಮುಟ್ಟುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ನಿಯಮಿತವಾಗಿ ಕಣ್ಣಿನ ತಪಾಸಣೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಕಣ್ಣಿನ ಕಾಯಿಲೆಗಳಿಗೆ ಹೆಚ್ಚಿನ ಔಷಧಿ ಉಪಯೋಗಿಸಬೇಡಿ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹ ಮತ್ತು ಕಣ್ಣುಗಳು ಆರೋಗ್ಯವಾಗಿರುತ್ತವೆ ಎಂದು ಹೇಳಿದರು.
ಕೊಟ್ರೇಶ ಸಜ್ಜನರ್, ಸುರೇಶ ಬೆಲಹುಣಸಿ, ವಿಜಯರಡ್ಡಿ ಮೇಕಳಿ, ರಾಜೀವ ಮಾಂಡ್ರೆ, ಕೃಷ್ಣಾರೆಡ್ಡಿ ದುರ್ಗದ, ಎಸ್‌ಡಿಎಂಸಿ ಅಧ್ಯಕ್ಷ ಸುನೀಲ ಬಣಗಾರ, ವಿನಾಯಕ ಅಳವಂಡಿ, ಶ್ರೀನಿವಾಸ ಬಸವರೆಡ್ಡಿ, ರಾಘವೇಂದ್ರ ಬಡಿಗೇರ, ಪ್ರಮೋದ ಮೇಕಳಿ, ರಾಘವೇಂದ್ರ ಅಳವಂಡಿ, ರಾಕೇಶ ರಡ್ಡೇರ, ರಬ್ಬಾನಿ ಚೌರಿ, ಮಲ್ಲೇಶ ಸಜ್ಜನರ, ಶಿವರಾಜ ಸಜ್ಜನರ, ವೆಂಕಟೇಶ ಹರಗನೂರ, ಫಕೀರರಡ್ಡಿ ಮರಡ್ಡಿ ಇದ್ದರು.