ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿ-ಮೇಟಿ ಒತ್ತಾಯ

| Published : Jan 04 2025, 12:31 AM IST

ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿ-ಮೇಟಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಅನುದಾನ ಮೀಸಲು ಈಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದರು.

ಹಾವೇರಿ: ರಾಜ್ಯದಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಅನುದಾನ ಮೀಸಲು ಈಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದರು.ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದ್ದು, ಪ್ರಮುಖ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸಮರ್ಪಕ ಅನುದಾನ ನೀಡದ ಹಿನ್ನೆಲೆಯಲ್ಲಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ರೈತರ ಸಂಕಷ್ಟಗಳನ್ನು ಅರಿತುಕೊಂಡು ಮುಂಬರುವ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟು ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು. ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದು, ರಾಜ್ಯ ಸರ್ಕಾರ ಮಾತ್ರ ಇನ್ನು ಈ ಕಾಯ್ದೆಗಳನ್ನು ವಾಪಸ್ ಪಡೆಯಲು ಮೀನಾಮೇಷ ಎಣಿಸುತ್ತಿದೆ. ಈ ಮೊದಲು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕರು ಈಗ ಚಕಾರ ಎತ್ತುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ಈ ಬಗ್ಗೆ ಮೌನವಾಗಿರುವುದು ನೋಡಿದರೆ ರಾಜ್ಯ ಸರ್ಕಾರ ರೈತ ವಿರೋಧಿ ಎಂಬುದು ಸ್ಪಷ್ಟವಾಗುತ್ತಿದೆ ಎಂದರು. ರಾಜ್ಯದಲ್ಲಿ 1167 ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎಂದು ಸರ್ಕಾರವೇ ಅಂಕಿಅಂಶ ಬಿಡುಗಡೆ ಮಾಡಿದ್ದು, ರೈತರ ಆತ್ಮಹತ್ಯೆ ತಡೆಯುವಂತಹ ಕೆಲಸಕ್ಕೆ ಮುಂದಾಗುತ್ತಿಲ್ಲ. ಸರ್ಕಾರದ ಪುಕ್ಕಟೆ ಯೋಜನೆಗಳಿಗೆ ಹಣ ನೀಡುತ್ತಿದ್ದರಿಂದ ಎಲ್ಲದರ ಮೇಲೆ ದರ ಹೆಚ್ಚಳ ಮಾಡುತ್ತಿರುವ ಸರ್ಕಾರ ಸ್ಟಾಂಪ್‌ಡ್ಯೂಟಿ, ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕಕ್ಕೆ ಲಕ್ಷಗಟ್ಟಲೇ ಹಣ ಕಟ್ಟುವಂತೆ ಮಾಡುತ್ತಿದ್ದು, ರೈತರ ಮೇಲೆ ಬರೆ ಎಳೆಯುತ್ತಿದೆ ಎಂದರು. ಕೃಷಿ ಹಾಗೂ ಇಂಧನ ಸಚಿವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿಲ್ಲ. ರೈತರ ಸಂಕಷ್ಟಗಳನ್ನು ಆಲಿಸುವ ಕೆಲಸ ಮಾಡುತ್ತಿಲ್ಲ ಇಂತಹ ಸಚಿವರು ಸಂಪುಟದಲ್ಲಿ ಇದ್ದರು ಉಪಯೋಗ ಇಲ್ಲದಂತಾಗಿದ್ದು, ರಾಜ್ಯ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದರು. ಎಂ.ಡಿ.ಕಾಲೇಬಾಗ ಮಾತನಾಡಿ, ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೆರೆ-ಕಟ್ಟೆಗಳು ಒಡೆದು ಹೋಗಿದ್ದು, ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಹಿರೇಕೆರೂರು ತಾಲೂಕಿನ ಕೆರೆಗಳ ಅಭಿವೃದ್ಧಿ ಮಾಡುವಂತೆ ಶಾಸಕ ಯು.ಬಿ.ಬಣಕಾರ ಅವರಿಗೆ ಮನವಿ ಮಾಡಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಸಂಗಣ್ಣ ಬಾಗೇವಾಡಿ, ಫಕೀರಪ್ಪ ಪೂಜಾರ, ಮಂಜುಳಾ ಕರಬಸಮ್ಮನವರ, ಬಿ.ಎಸ್. ಕಣವಿ, ಹನುಮಂತಪ್ಪ ದೊಡ್ಡಮನಿ, ಪ್ರೇಮಾ ಹುಲ್ಲತ್ತಿ, ಎ. ಇದ್ದರು.