ಕಾರವಾರ: ಜಿಲ್ಲೆಯಲ್ಲಿ ಗರ್ಭಿಣಿಯರನ್ನು ಪ್ರಸವಪೂರ್ವ ಆರೈಕೆಗೆ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು, ಅವರಿಗೆ ಸರ್ಕಾರದಿಂದ ನೀಡುವ ಎಲ್ಲ ಸವಲತ್ತು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು.
ಅವರು ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗರ್ಭಿಣಿಯರನ್ನು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು ತಾಯಿ ಕಾರ್ಡ್ ವಿತರಿಸುವ ಮೂಲಕ ಗರ್ಭಿಣಿ ಮತ್ತು ಶಿಶುವಿನ ಆರೋಗ್ಯವಂತ ಬೆಳವಣಿಗೆ ಮತ್ತು ಸುರಕ್ಷಿತ ಹೆರಿಗೆಯಾಗುವ ರೀತಿಯಲ್ಲಿ ನಿಯಮಿತವಾಗಿ ತಪಾಸಣೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಸೂಚಿಸಿದ ಅವರು ವಿಳಂಬ ನೋಂದಣಿಗೆ ಆಗದಂತೆ ಎಚ್ಚರವಹಿಸಿ ಎಂದರು.
ಜಿಲ್ಲೆಯಲ್ಲಿ 2025-26ರಲ್ಲಿ 15,607 ಹೆರಿಗೆಗಳಾಗಿದ್ದು, ಅದರಲ್ಲಿ 90 ಶಿಶು ಮರಣಗಳು ಸಂಭವಿಸಿದ್ದು, ಇವುಗಳಲ್ಲಿ ವಿವಿಧ ವೈದ್ಯಕೀಯ ಕಾರಣಗಳಿಂದ ತಡೆಯಲು ಸಾಧ್ಯವಿಲ್ಲದ 69 ಮರಣಗಳಾಗಿವೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಶಿಶು ಮರಣ ಪ್ರಮಾಣದ ಸಂಖ್ಯೆ ಕಡಿಮೆ ಇದ್ದು, ಇದನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವಂತೆ ತಿಳಿಸಿದ ಅವರು, ಗರ್ಭಿಣಿಯರಿಗೆ ನವಜಾತ ಶಿಶುವಿನ ಪಾಲನೆ ಮತ್ತು ಹಾಲುಣಿಸುವ ವಿಧಾನಗಳ ಕುರಿತಂತೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಎಚ್‌ಪಿವಿ ಲಸಿಕೆ ಸೇರಿದಂತೆ ವಿವಿಧ ಲಸಿಕೆಗಳನ್ನು ನೀಡುವ ಕಾರ್ಯಕ್ರಮಗಳಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು, ಸಾಂಕ್ರಾಮಿಕ ರೋಗಗಳು ಮತ್ತು ವಿವಿಧ ರೀತಿಯ ರೋಗಗಳಿಗೆ ನೀಡುವ ಚಿಕಿತ್ಸೆಯ ಕುರಿತಂತೆ ಪರಿಶೀಲನೆ ನಡೆಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಕೆಎಫ್‌ಡಿ ಸಂಶಯಾಸ್ಪದ ಪ್ರಕರಣಗಳಲ್ಲಿ 24 ಗಂಟೆಗಳ ಒಳಗೆ ಸ್ಯಾಂಪಲ್ ಕಲೆಕ್ಷನ್ ಮಾಡುವಂತೆ ಮತ್ತು ನಾಯಿ ಕಡಿತ ಮತ್ತು ಹಾವು ಕಡಿತಕ್ಕೆ ಸಂಬಂಧಿಸಿದ ಔಷಧಗಳ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿ ಇರುವಂತೆ ಎಚ್ಚರಿಕೆ ವಹಿಸಬೇಕು. ವೈದ್ಯಕೀಯ ಶಿಬಿರಗಳನ್ನು ಅಯೋಜಿಸುವ ಮೂಲಕ ರೋಗಿಗಳನ್ನು ಗುರುತಿಸಿ, ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಬೇಕು. ಆರೋಗ್ಯ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳಲ್ಲಿ ಕೊರತೆಯಿದ್ದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವಂತೆ ಮತ್ತು ಮಳೆಗಾಲದ ಆರಂಭಕ್ಕೆ ಮುನ್ನ ಕಟ್ಟಡಗಳ ಅಗತ್ಯ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ್ ರಾವ್, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ್ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು ಮತ್ತು ಎಲ್ಲ ತಾಲೂಕುಗಳ ವೈದ್ಯಾಧಿಕಾರಿಗಳು ಇದ್ದರು.