ಮಹಿಳೆಯರ ಸುರಕ್ಷತೆ, ಆರ್ಥಿಕ ಸಬಲೀಕರಣಕ್ಕೆಅನುಕೂಲ ವಾತಾವರಣ ಸೃಷ್ಟಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ: ಮಹಿಳೆಯರ ಸುರಕ್ಷತೆ, ಆರ್ಥಿಕ ಸಬಲೀಕರಣಕ್ಕೆಅನುಕೂಲ ವಾತಾವರಣ ಸೃಷ್ಟಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಚೇತನಾ, ಧನಶ್ರೀ, ಉದ್ಯೋಗಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳ ಬಗ್ಗೆ ಅರ್ಹ ಮಹಿಳೆಯರಿಗೆ ಅರಿವು ಮೂಡಿಸಿ, ಹೆಚ್ಚು ಫಲಾನುಭವಿಗಳನ್ನಾಗಿಸಿ, ಅವರು ಸ್ವಾವಲಂಭಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯ ಖಾತ್ರಿಗಾಗಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಜಿಲ್ಲೆಯಲ್ಲಿ 3149ಕ್ಕೂ ಹೆಚ್ಚು ಸಂಸ್ಥೆಗಳಿವೆ. ಆದರೆ 789 ಸಂಸ್ಥೆಗಳಲ್ಲಿ ಮಾತ್ರ ಆಂತರಿಕ ಸಮಿತಿ ರಚಿಸಲಾಗಿದ್ದು, ಉಳಿದ ಸಂಸ್ಥೆಗಳಲ್ಲೂ ಸಮಿತಿ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಒಟ್ಟು 47 ನಿವಾಸಿಗಳಿದ್ದು, ಅವರಿಗೆ ವಾರಕ್ಕೆ 2 ದಿನದಂತೆ ನಮ್ಮ ಕ್ಲಿನಿಕ್‌ನಲ್ಲಿ ಆರೋಗ್ಯ ಸೇವೆ ನೀಡುವಂತೆ, ಅವರಿಗೆ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಅರ್ಹ ಉದ್ಯೋಗ ಹೊಂದುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.ಜಿಲ್ಲೆಯಲ್ಲಿ 34,149 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದು, ಅವರಲ್ಲಿ ನಿಗಧಿಗಿಂತ ಕಡಿಮೆ ತೂಕ ಹೊಂದಿರುವ 123 ಮಕ್ಕಳು ಹಾಗೂ ತೀವ್ರ ಅಪೌಷ್ಠಿಕತೆ ಹೊಂದಿದ 20 ಮಕ್ಕಳಿದ್ದಾರೆ. ಅವರಿಗೆ ಪೌಷ್ಠಿಕ ಆಹಾರ ನೀಡಲು ಆದ್ಯತೆ ನೀಡಬೇಕು. ಹೊರ ಜಿಲ್ಲೆಯಿಂದ ಬಂದ ಮಕ್ಕಳಲ್ಲಿ ಈ ಅಪೌಷ್ಠಿಕತೆ ಕಂಡುಬಂದಿದ್ದು, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.ಜಿಲ್ಲೆಯಲ್ಲಿ 1222 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1061 ಸ್ವಂತ ಕಟ್ಟಡಗಳಲ್ಲಿ, 42 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 9 ಹೊಸ ಕಟ್ಟಡಗಳಿಗೆ ಮಂಜೂರಾತಿ ದೊರಕಿದೆ ಎಂದರು.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಮಗುವಿಗೆ 5000 ರು. ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ 6000 ರು. ನೀಡಲಾಗುತ್ತಿದ್ದು, ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಯೋಜನೆಯ ಸೌಲಭ್ಯ ತಲುಪಿಸಬೇಕು ಎಂದರು.ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ನಿತಿನ್ ವೈ. ರಾವ್, ಎಎಸ್‌ಪಿ ಸುಧಾಕರ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರೇಮಮೂರ್ತಿ ಕೆ., ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.ಸಖಿಯಲ್ಲಿ 73 ಪ್ರಕರಣ ದಾಖಲು: ಸಖಿ ಒನ್ ಸ್ಟಾಪ್ ಸೆಂಟರ್ 2026ರ ಏಪ್ರಿಲ್ ನಿಂದ ಜೂನ್ ವರೆಗೆ ಕೌಟುಂಬಿಕ ದೌರ್ಜನ್ಯ, ದೈಹಿಕ ಹಲ್ಲೆ, ಸುರಕ್ಷಿತ ಪಾಲನೆ, ಮಾನಸಿಕ ಕಿರುಕುಳ, ಜಾಗದ ತಕರಾರು, ಅಸಹಾಯಕ ಮಹಿಳೆಗೆ ಸಂಬಂಧಿಸಿದಂತೆ 73 ಪ್ರಕರಣಗಳು ದಾಖಲಾಗಿ, 46 ಪ್ರಕರಣಗಳು ಇತ್ಯರ್ಥಗೊಂಡು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 1, ಕಾನೂನು ಸಮಾಲೋಚನೆಯಲ್ಲಿ 9 ಹಾಗೂ 17 ಆಪ್ತ ಸಮಾಲೋಚನೆ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.