ರೈಲ್ವೆ ಇಲಾಖೆಯಲ್ಲಿ ಪ್ರತಿ ತಿಂಗಳು ಅರ್ಹತೆ ಮಾನದಂಡವಾಗಿಟ್ಟುಕೊಂಡು ೧೫-೨೦ ನೇಮಕಾತಿ ನಡೆಯುತ್ತಿದ್ದು ಅದರಲ್ಲಿ ಕೂಡ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ರೈಲ್ವೆ ಇಲಾಖೆಯಲ್ಲಿ ಪ್ರತಿ ತಿಂಗಳು ಅರ್ಹತೆ ಮಾನದಂಡವಾಗಿಟ್ಟುಕೊಂಡು ೧೫-೨೦ ನೇಮಕಾತಿ ನಡೆಯುತ್ತಿದ್ದು ಅದರಲ್ಲಿ ಕೂಡ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಕಲ್ಪತರು ಕಾಲೇಜು ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕ್ರೀಡಾಕಲ್ಪ-೨.೦ ವಿಟಿಯು ೨೭ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರದಾನಿ ಮೋದಿ ೨೦೧೬-೧೭ರಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ ದೇಶದಾದ್ಯಂತ ೧೦೪೫ ಖೇಲೋ ಇಂಡಿಯಾ ಕ್ರೀಡಾಕೇಂದ್ರಗಳನ್ನು ಸ್ಥಾಪಿಸಿ ಒಲಿಂಪಿಕ್ ಪೋಡಿಯಂ ಸಿಸ್ಟಂ, ರಾಷ್ಟ್ರೀಯ ಕ್ರೀಡಾ ನೀತಿ, ಖೇಲೋ ಭಾರತ ನೀತಿಗಳನ್ನು ಜಾರಿಗೆ ತಂದು ಕ್ರೀಡೆಗೆ ಪ್ರೋತ್ಸಾಹಿಸಿರುವ ಜೊತೆಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ೨೦೩೦ಕ್ಕೆ ಭಾರತದಲ್ಲಿ ಒಲಿಂಪಿಕ್ ಕ್ರೀಡೆ ಆಯೋಜಿಸಲು ಭಾರದ ತೀರ್ಮಾನಿಸಿದೆ. ಆದು ದೇಶದ ಎಲ್ಲ ಕ್ರೀಡಾಪಟುಗಳಿಗೂ ಅನುಕೂಲವಾಗಿದೆ. ಕ್ರೀಡೆ ಉಲ್ಲಾಸಕ್ಕೆ, ಆರೋಗ್ಯಕ್ಕೆ, ಸ್ನೇಹ-ಬಾಂಧವ್ಯ ಪ್ರಾರಂಭಿಸಲು ಸಂದೇಶ ನೀಡುತ್ತದೆ. ಈ ಸಾಲಿನ ವಿಟಿಯು ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಆತಿಥ ವಹಿಸಿದ್ದು ಇದು ಕ್ರೀಡಾಕೂಟ ಮಾತ್ರವಲ್ಲ. ಇದು ಯುವಶಕ್ತಿಯ ಪರಿಶ್ರಮ ಮತ್ತು ಸಂಕಲ್ಪ ಶಕ್ತಿಯ ಪ್ರದರ್ಶನವಾಗಿದೆ ಎಂದರು.

ವಿಟಿಯು ಕುಲಪತಿಗಳಾದ ವಿಟಿಯು ಕುಲಪತಿ ಡಾ. ವಿದ್ಯಾಶಂಕರ್, ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಯಲ್ಲಿ ಕ್ರೀಡೆಗೂ ಆದ್ಯತೆ ನೀಡಬೇಕು. ಇದಕ್ಕೆ ಪೂರ್ಣ ಸಹಕಾರವನ್ನು ವಿ.ಟಿ.ಯು. ನೀಡುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ದಿನದ ಬಹುತೇಕ ಸಮಯವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಿದ್ದಾರೆ. ಇದರಿಂದ ನಿಮ್ಮ ಗುರಿ ಸಾಧನೆಗೆ ಹಾಗೂ ಆರೋಗ್ಯಕ್ಕೆ ಹೆಚ್ಚುಪೆಟ್ಟು ಬೀಳುತ್ತದೆ. ಮೊಬೈಲ್ ಹೆಚ್ಚು ಬಳಕೆಯಿಂದ ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ತೊಂದರೆಯಾಗುವುದಲ್ಲದೆ ಭವಿಷ್ಯದಲ್ಲಿ ವ್ಯವಸ್ಥಿತ ಜೀವನ ರೂಪಿಸುವುದರಲ್ಲಿ ಧಕ್ಕೆ ಉಂಟಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಕ್ರೀಡೆ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಎರಡನ್ನು ವಿದ್ಯಾರ್ಥಿಗಳಲ್ಲಿ ಉಂಟುಮಾಡುತ್ತಾ ಸಂಘಟನಾ ಗುಣ ಮತ್ತು ನಾಯಕತ್ವದ ಗುಣವನ್ನುಂಟುಮಾಡುವುದು, ಶಿಕ್ಷಣ ಮತ್ತು ಉದ್ಯೋಗಕ್ಕೆ ಕ್ರೀಡೆಯಿಂದ ವಿಶೇಷ ಅವಕಾಶಗಳು ಲಭ್ಯವಾಗುತ್ತವೆ. ಇದನ್ನು ಎಲ್ಲಾ ಕ್ರೀಡಾಪಟುಗಳೂ ಸದ್ವಿನಿಯೋಗಮಾಡಿಕೊಳ್ಳಬೇಕೆಂದು ಆಶಿಸುತ್ತೇನೆ ಎಂದರು.

ರಾಷ್ಟ್ರೀಯ ಕ್ರೀಡಾಪಟು ಹಾಗೂ ಕೆ.ವಿ.ಎಸ್. ಖಜಾಂಚಿಗಳಾದ ಶ್ರೀ ಟಿ.ಎಸ್. ಶಿವಪ್ರಸಾದ್ ಮಾತನಾಡಿ ಕ್ರೀಡಾಕೂಡದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆ ಆಯುಕ್ತ ಆರ್.ಚೇತನ್, ಅಕಾಡೆಮಿಕ್ ಸೆನೆಟ್‌ಮೆಂಬರ್ ಡಾ.ಎಚ್.ಬಿ.ಬಾಲಕೃಷ್ಣ, ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ವಿ.ನಿಹಾಲ್‌ಜೋಯಲ್, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಬೆಂಗಳೂರು ಹಾಗೂ ಅಕಾಡೆಮಿಕ್ ಸೆನೆಟ್ ಮೆಂಬರ್ ಡಾ. ಎಚ್.ಬಿ. ಬಾಲಕೃಷ್ಣ, ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ ಮತ್ತು ಎಚ್.ಜಿ.ಸುಧಾಕರ್, ಪ್ರಾಂಶುಪಾಲ ಡಾ. ಎಚ್.ಸಿ.ಸತೀಶ್‌ಕುಮಾರ್, ತಹಸೀಲ್ದಾರ್ ಮೋಹನ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್.ಜಯಂತ್ ಉಪಸ್ಥಿತರಿದ್ದರು.

ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಕಲ್ಪತರು ಕಾಲೇಜು ಕ್ರೀಡಾಂಗಣದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಕ್ರೀಡಾಪಟುಗಳು, ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ೧೪೨ ಕಾಲೇಜುಗಳಿಂದ ೧೮೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು, ೨೫೦ ಕೋಚ್‌ಗಳು ಭಾಗವಹಿಸಿದ್ದರು. ರಾತ್ರಿ ೮ ಗಂಟೆವರೆಗೂ ಫ್ಲೆಡ್‌ಲೈಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.