ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: ವಿಶ್ವನಾಥ ಗದ್ದೇಮನೆ

| Published : Oct 14 2025, 01:00 AM IST

ಸಾರಾಂಶ

ನರಸಿಂಹರಾಜಪುರ, ನಮ್ಮ ಸೇವಾ ಕೇಂದ್ರದಿಂದ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಜೊತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ್‌ ಗದ್ದೇಮನೆ ತಿಳಿಸಿದರು.

- ಜಿನಿ ವಿಶ್ವನಾಥ ಸೇವಾ ಕೇಂದ್ರದಿಂದ ಹಾವುಗೊಲ್ಲರ ಕುಟುಂಬದವರ ಆರೋಗ್ಯ ತಪಾಸಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಮ್ಮ ಸೇವಾ ಕೇಂದ್ರದಿಂದ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಜೊತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ್‌ ಗದ್ದೇಮನೆ ತಿಳಿಸಿದರು.

ಭಾನುವಾರ ಜಿನಿವಿಶ್ವನಾಥ್ ಸೇವಾ ಕೇಂದ್ರ, ಆರೋಗ್ಯ ಇಲಾಖೆಯಿಂದ ತಾಲೂಕಿನ ಬಾಳೆಕೊಪ್ಪದಲ್ಲಿ ಮುಚ್ಚಿದ ಶಾಲಾ ಆವರಣದ ಶೆಡ್‌ನಲ್ಲಿ ವಾಸ ಮಾಡುತ್ತಿರುವ ಹಾವುಗೊಲ್ಲರ ಕುಟುಂಬದವರ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಚ್ಛತಾ ಅಭಿಯಾನವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಆರೋಗ್ಯ, ಶಿಕ್ಷಣ, ಸ್ವಚ್ಛತೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಶೃಂಗೇರಿ ಕ್ಷೇತ್ರದ ಆಯ್ದ ಶಾಲೆಗಳ ಸುಮಾರು 8500 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಅಗತ್ಯ ಪಠ್ಯ ಪುಸ್ತಕ, ನೋಟ್ ಬುಕ್‌ಗಳನ್ನು ವಿತರಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಸ್ವಚ್ಛತೆಯಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗಗಳಲ್ಲಿ ಕ್ಯಾಂಪ್‌ಗಳಲ್ಲಿ, ಕಾಲೋನಿಗಳಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಲಾಗುತ್ತಿದೆ. ಸ್ವಚ್ಛತೆ ಇದ್ದರೆ ಆರೋಗ್ಯ, ಶಿಕ್ಷಣ ಇದ್ದರೆ ಭವಿಷ್ಯ. ಆದ್ದರಿಂದ ಎಲ್ಲರೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಾವು ಗೊಲ್ಲರ ಕುಟುಂಬದವರ ಮಕ್ಕಳು ತಮ್ಮ ಪೋಷಕರು ಮಾಡುತ್ತಿರುವ ವೃತ್ತಿಯನ್ನೇ ಮಾಡದೆ ಉತ್ತಮ ಶಿಕ್ಷಣ ಕಲಿಯಬೇಕು ಎಂದು ಸಲಹೆ ನೀಡಿದರು.ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಮನುಷ್ಯನಿಗೆ ಗಾಳಿ, ನೀರು, ಆರೋಗ್ಯ ಅತಿ ಮುಖ್ಯವಾಗಿದೆ. ಎಲ್ಲರೂ ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಕಡೆ ಗಮನಹರಿಸಬೇಕು. ಕಲುಷಿತ ನೀರಿನಿಂದ ಹಲವಾರು ರೋಗಗಳು ಬರುತ್ತವೆ. ಕಲುಷಿತ ನೀರಿನ ಸೇವನೆಯಿಂದ ಅತಿಸಾರ ಬೇಧಿ, ಕೆಮ್ಮು, ಶೀತ, ಜ್ವರ ಕಾಣಿಸಿಕೊಳ್ಳುತ್ತದೆ. ಆರೋಗ್ಯದಲ್ಲಿ ಏರುಪೇರಾದರೆ ಮನೆ ಮದ್ದು ಮಾಡಿ ಸುಮ್ಮನಾಗದೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಔಷದಿ, ಚಿಕಿತ್ಸೆ ಪಡೆಯಬೇಕು. ಕೆಲವು ಕಾಯಿಲೆಗಳು ಅವಧಿ ಮೀರಿದರೆ ಸಾವನ್ನಪ್ಪುವ ಸಂಭವವಿರುತ್ತದೆ ಎಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು ಮಾತನಾಡಿ, ಎಲ್ಲರೂ ಕಾನೂನಿನ ಅರಿವು ಹೊಂದಿರಬೇಕು. ನಿಮಗೆ ನಿವೇಶನ ನೀಡಲು ಜಾತಿ ಪ್ರಮಾಣ ಇಲ್ಲದೆ ಸಮಸ್ಯೆ ಆದಾಗ ನ್ಯಾಯಾಧೀಶರೇ ವೈಯಕ್ತಿಕ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಿಯಮಾನುಸಾರವಾಗಿ ಜಾತಿ ಪ್ರಮಾಣ ಮಾಡಿಸಿಕೊಟ್ಟು ನಿಮಗೆ ನಿವೇಶನ ಪಡೆಯಲು ಸಹಕಾರ ಮಾಡಿದ್ದಾರೆ. ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿಯೇ ಬದುಕಬೇಕು. ನಮಗೆ ಕಾನೂನಿನ ಅರಿವಿಲ್ಲ ಎಂದು ತಪ್ಪು ಮಾಡಿದರೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದರು.ಕಡಹಿನಬೈಲು ಗ್ರಾಪಂ. ಅಧ್ಯಕ್ಷೆ ಲಿಲ್ಲಿಮ್ಯಾಥ್ಯುಕುಟ್ಟಿ ಮಾತನಾಡಿ, ಗ್ರಾಪಂನಿಂದ ನಿಮಗೆ ಬೇಕಾದ ನೀರಿನ ಸೌಲಭ್ಯ ವನ್ನು ಕಲ್ಪಿಸಿಕೊಟ್ಟಿದ್ದೇವೆ. ಸ್ವಚ್ಛತೆ ಕಾಪಾಡಿ, ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದರು.ಕಾರ್ಯಕ್ರಮದಲ್ಲಿ ಜಿನಿವಿಶ್ವನಾಥ್ ಸೇವಾ ಕೇಂದ್ರದಿಂದ ಹಾವುಗೊಲ್ಲ ಕುಟುಂಬದವರಿಗೆ ಕುಡಿಯುವ ನೀರಿನ ಫಿಲ್ಟರ್ ನೀಡಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ಚಂದ್ರ ಪ್ರಭಾ ಹಾವುಗೊಲ್ಲ ಕುಟುಂಬದ ಮಹಿಳೆಯರು ಹಾಗೂ ಮಕ್ಕಳೊಂದಿಗೆ ಆರೋಗ್ಯ ವಿಚಾರವಾಗಿ ಸಂವಾದ ನಡೆಸಿದರು. ನಂತರ ಹಾವುಗೊಲ್ಲ ಕುಟುಂಬದ ಸದಸ್ಯರು ಆರೋಗ್ಯ ತಪಾಸಣೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಸಮುದಾಯ ಆರೋಗ್ಯ ಅಧಿಕಾರಿ ರಾಹಿಲಾ, ಎಂ.ಪಿ.ಮನು, ಸಾಜು ಇದ್ದರು.