ಗೆಲುವು ಸಾಧಿಸಿದ ತಕ್ಷಣ ನೀರಾವರಿ ಯೋಜನೆಗೆ ಆದ್ಯತೆ: ವಿ.ಸೋಮಣ್ಣ

| Published : Apr 24 2024, 02:17 AM IST

ಗೆಲುವು ಸಾಧಿಸಿದ ತಕ್ಷಣ ನೀರಾವರಿ ಯೋಜನೆಗೆ ಆದ್ಯತೆ: ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತದಾರರು ಆಶೀರ್ವಾದ ಮಾಡಲಿದ್ದಾರೆ.

ಕನ್ನಡ ಪ್ರಭ ವಾರ್ತೆ ಗುಬ್ಬಿ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತದಾರರು ಆಶೀರ್ವಾದ ಮಾಡಲಿದ್ದಾರೆ. ಸಂಸದನಾಗಿ ಆಯ್ಕೆ ಮಾಡಿದ ತಕ್ಷಣದಲ್ಲೇ ನೀರಾವರಿ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ತಾಲೂಕಿನ ಜಿ.ಹೊಸಹಳ್ಳಿದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ಫಲಿತಾಂಶ ಬಂದ ತಕ್ಷಣವೇ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆ ಹಾಗೂ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕೆಲಸ, ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇನೆ. ಬಿಜೆಪಿ ಬೆಂಬಲಿಸಿ ಮೋದಿ ಸರ್ಕಾರ ಅನುಷ್ಠಾನಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ವಿದ್ಯುತ್ ಸಮಸ್ಯೆ ಈಗ ರಾಜ್ಯದಲ್ಲೇ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ 15 ಸಾವಿರ ರು.ಗೆ ಪರಿವರ್ತಕ ನೀಡಲಾಗುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ 2.5 ಲಕ್ಷ ವಸೂಲಿ ಮಾಡಿ ಗ್ಯಾರಂಟಿಗೆ ಹಣ ನೀಡುತ್ತಿದೆ. ಈ ಸಮಸ್ಯೆ ಆಲಿಸಿರುವ ಮೋದಿ ಕೃಷಿಕ ವರ್ಗಕ್ಕೆ ಉಚಿತ ವಿದ್ಯುತ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.

ಚುನಾವಣಾ ಉಸ್ತುವಾರಿ, ಮಾಜಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಬಿಕ್ಕೆಗುಡ್ಡ ಯೋಜನೆಯ ಪೂರ್ಣ ಕೆಲಸಕ್ಕೆ ಸೋಮಣ್ಣರ ಜೊತೆ ನಾನು ಕೂಡಾ ಇಲ್ಲೇ ವಾಸ್ತವ್ಯ ಹೂಡಿ ಹೊಸಹಳ್ಳಿ ಅಕ್ಕಪಕ್ಕ ಗ್ರಾಮಕ್ಕೆ ನೀರು ಕೊಡುವ ಕೆಲಸ ಮಾಡುತ್ತೇವೆ. ಹೇಮಾವತಿ ಡ್ಯಾಂ ನಿರ್ಮಾಣ ದೇವೇಗೌಡರು ಮಾಡಿದ್ದು, ತುಮಕೂರು ಜಿಲ್ಲೆಗೆ ನೀರು ಸಿಕ್ಕಿದೆ ಎಂದು ಹೇಳಿದರು.

ನಿಯಮಾನುಸಾರ ನೀರು ಹಂಚುವ ಕೆಲಸ ಮಾಧುಸ್ವಾಮಿ ಪ್ರಾಮಾಣಿಕವಾಗಿ ಮಾಡಿದ್ದರು. ಕೇಂದ್ರ ಸರ್ಕಾರ ಕರೋನಾ ಸಮಯದಲ್ಲಿ ದೇಶದ 80 ಕೋಟಿ ಜನರಿಗೆ ರಾಜ್ಯದಲ್ಲಿ ಅಕ್ಕಿ,ಗೋಧಿ, ರಾಗಿ ನೀಡಿತ್ತು. ಕೊಬ್ಬರಿ, ಭತ್ತ, ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುತ್ತಿರುವುದು ಕೇಂದ್ರ ಸರ್ಕಾರ ಎಂಬುದು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಸೋಮಣ್ಣ ಒಂದು ಲಕ್ಷಕ್ಕೂ ಅಧಿಕ ಮತ ಪಡೆಯಲು ಎರಡೂ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಕಳೆದ 25 ವರ್ಷದಿಂದ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿಲ್ಲ. ಸೋಮಣ್ಣರನ್ನು ಗೆಲ್ಲಿಸಿ ಅಭಿವೃದ್ದಿ ಕೆಲಸಕ್ಕೆ ಅಡಿಗಲ್ಲು ಹಾಕಿಸೋಣ ಎಂದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಕಳ್ಳಿಪಾಳ್ಯ ಲೋಕೇಶ್, ಶಿವಲಿಂಗಯ್ಯ, ಸುರೇಶ್ ಗೌಡ, ಬಿಜೆಪಿ ಮುಖಂಡರಾದ ಪಿ.ಬಿ.ಚಂದೇಶೇಖರಬಾಬು, ಎನ್.ಸಿ.ಪ್ರಕಾಶ್, ಜಿ.ಚಂದ್ರಶೇಖರ್, ಬಸವರಾಜ್, ಚೇತನ್ ನಾಯಕ, ಕಾರ್ತಿಕ್, ಕಿರಣ್ ಇದ್ದರು.