ಕನ್ನಡಪ್ರಭ ವಾರ್ತೆ ಕಲಬುರಗಿಕೈದಿಗಳನ್ನು ಕೇವಲ ಶಿಕ್ಷೆಗೆ ಒಳಪಡಿಸುವುದಷ್ಟೇ ಅಲ್ಲ, ಅವರನ್ನು ತಿದ್ದಿ ಸಮಾಜದ ಮುಖ್ಯವಾಹಿನಿಗೆ ಮರಳಿಸುವ ಉದ್ದೇಶದಿಂದ ಕಾರಾಗೃಹಗಳಲ್ಲಿ ಅಗತ್ಯ ಸುಧಾರಣೆ ಕೈಗೊಳ್ಳುವುದು ಹಾಗೂ ತಿದ್ದುಪಡಿ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುವುದು ಪ್ರಮುಖ ಜವಾಬ್ದಾರಿ ಎಂದು ರಾಜ್ಯ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಐವನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಅಗತ್ಯವಿರುವ ಸುಧಾರಣೆಗಳ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೈಲುಗಳಲ್ಲಿ ಭದ್ರತೆ, ಶಿಸ್ತು ಮತ್ತು ಕೈದಿಗಳ ಪುನರ್ವಸತಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೇಶಿಸಲಾಗಿದೆ. ಕಾರಾಗೃಹಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ರಾಜ್ಯದಾದ್ಯಂತ ಕಾರಾಗೃಹಗಳ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ. ಕಲಬುರಗಿಯಲ್ಲಿ ಜುಲೈ 14ರಂದು ಮೂವರು ಕೈದಿಗಳು ಪರಾರಿಯಾದ ಘಟನೆ ನಡೆಯಬಾರದಿತ್ತು. ಆದರೆ, ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕಲಬುರಗಿ ಮಾತ್ರವಲ್ಲದೆ ಬಳ್ಳಾರಿ, ಗೋಕಾಕ್ ಹಾಗೂ ಬೆಳಗಾವಿ ವಿವಿಧೆಡೆ ಕೈದಿಗಳ ಪರಾರಿ ಪ್ರಕರಣ ನಡೆದಿವೆ. ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದರು.ಕಾರಾಗೃಹಗಳಲ್ಲಿ ಗಾಂಜಾ ಪತ್ತೆಯಾದ ಪ್ರಕರಣಗಳ ಕುರಿತು ಮಾತನಾಡಿದ ಅವರು, ಕಳೆದ ಜನವರಿಯಲ್ಲಿ ಬೆಳಕಿಗೆ ಬಂದ ಪ್ರಕರಣದ ನಂತರ ಯಾವುದೇ ಗಾಂಜಾ ಪ್ರಕರಣ ವರದಿಯಾಗಿಲ್ಲ. ಆ ಪ್ರಕರಣಕ್ಕೆ ಸಂಬಂಧಿತ ಸಿಬ್ಬಂದಿಯನ್ನು ಮರುನೇಮಕ ಮಾಡಿಲ್ಲ ಎಂದರು.ಕೇಂದ್ರ ಕಾರಾಗೃಹದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಕೆಲ ಕೆಲಸಗಳು ಬಾಕಿ ಉಳಿದಿವೆ. ಇಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಖಾಯಂ ಅಧಿಕಾರಿಗಳ ಅಗತ್ಯವಿದೆ. ಈ ಸಮಸ್ಯೆಗಳನ್ನು ಕೂಡ ಶೀಘ್ರದಲ್ಲೇ ಪರಿಷ್ಕರಿಸಲಾಗುವುದು ಎಂದರು. ಕಾರಾಗೃಹ ಸಿಬ್ಬಂದಿ ಹುದ್ದೆ ನೇಮಕಾತಿಗೆ ಅಧಿಸೂಚನೆರಾಜ್ಯದ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 867 ಸಿಬ್ಬಂದಿ ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೇ 400 ಹುದ್ದೆಗಳು ಮೀಸಲಾಗಿವೆ. ನಿವೃತ್ತ ಸೈನಿಕರ ಸೇವೆಯನ್ನೂ ಬಳಸಿಕೊಳ್ಳುವ ಪ್ರಯತ್ನ ನಡೆದಿದೆ. 550 ಸಿಬ್ಬಂದಿ ಅಗತ್ಯವಿದ್ದರೂ ಕೇವಲ 220 ಮಂದಿ ಮಾತ್ರ ಮುಂದೆ ಬಂದಿದ್ದಾರೆ. ಸಂಬಳ ಕಡಿಮೆ ಎಂಬ ಕಾರಣದಿಂದ ಹಲವರು ಆಸಕ್ತಿ ತೋರಿಸುತ್ತಿಲ್ಲ. ಆದಾಗ್ಯೂ, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು. ಕಾರಾಗೃಹಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಇದೆ. ಕೈದಿಗಳನ್ನು ಕೇವಲ ಕೈದಿಗಳೆಂದು ನೋಡದೆ, ಅವರಿಗೆ ಉತ್ತಮ ಸೌಲಭ್ಯ ಮತ್ತು ತಿದ್ದುಪಡಿ ಸೇವೆ ಒದಗಿಸುವುದು ಮೊದಲ ಆದ್ಯತೆ. ಮನಃಪರಿವರ್ತನೆಯ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಇಲಾಖೆ ಮಾಡುತ್ತಿದೆ.-ಅಲೋಕ್ ಕುಮಾರ್, ಡಿಜಿಪಿ, ರಾಜ್ಯ ಕಾರಾಗೃಹ ಮತ್ತು ತಿದ್ದುಪಡಿ ಸೇವೆ
ಕಾರಾಗೃಹಗಳಲ್ಲಿ ಕೈದಿಗಳ ಪುನರ್ವಸತಿಗೆ ಆದ್ಯತೆ
ಕೈದಿಗಳನ್ನು ಕೇವಲ ಶಿಕ್ಷೆಗೆ ಒಳಪಡಿಸುವುದಷ್ಟೇ ಅಲ್ಲ, ಅವರನ್ನು ತಿದ್ದಿ ಸಮಾಜದ ಮುಖ್ಯವಾಹಿನಿಗೆ ಮರಳಿಸುವ ಉದ್ದೇಶದಿಂದ ಕಾರಾಗೃಹಗಳಲ್ಲಿ ಅಗತ್ಯ ಸುಧಾರಣೆ ಕೈಗೊಳ್ಳುವುದು ಹಾಗೂ ತಿದ್ದುಪಡಿ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುವುದು ಪ್ರಮುಖ ಜವಾಬ್ದಾರಿ ಎಂದು ರಾಜ್ಯ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.