ಅಭಿವೃದ್ಧಿ ಕಾಮಗಾರಿಗಳಿಗೆ ಬದ್ಧ: ಶಾಸಕ ಕಂದಕೂರು

| Published : Mar 04 2024, 01:15 AM IST

ಸಾರಾಂಶ

ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಅವಧಿಯಲ್ಲಿ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನೀಡಿದ್ದರು. ನಾನು ಸಹ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಬದ್ಧನಾಗಿದ್ದು ಗ್ರಾಮಸ್ಥರು ನನಗೆ ಸಂಪರ್ಕಿಸಿ ಎಂದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನನ್ನ ಪಾದಯಾತ್ರೆ ಆರಂಭವಾಗಿದ್ದು, ಪಂಚರತ್ನ ಸಮಾರಂಭ ನಡೆದಿದ್ದು, ಶಾಸಕನಾಗಿ ಆಯ್ಕೆಯಾದ ಮೊದಲ ಅಡಿಗಲ್ಲು ಸಮಾರಂಭ ನಡೆದಿದ್ದು ಯರಗೋಳ ಗ್ರಾಮದಲ್ಲಿ. ಈ ಗ್ರಾಮದ ಜನರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದ ನನ್ನ ಮೇಲೆ ಇದೆ. ನಿಮ್ಮ ಕಷ್ಟ, ಸುಖಗಳಿಗೆ ನಾನು ನಿಮ್ಮ ಜೊತೆಯಲ್ಲಿರುವೆ, ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ಸಮೀಪದ ಯರಗೋಳ ಗ್ರಾಮದಲ್ಲಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 1.78 ಲಕ್ಷ ರು. ಗಳು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ, 71 ಲಕ್ಷ ರು. ಗಳ ಸರ್ಕಾರಿ ಪ್ರೌಢಶಾಲೆಯ 4 ಕೋಣೆಗಳು, 20 ಲಕ್ಷ ರು.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಆಗಮಿಸಿದ್ದು ಸಂತಸ ತರಿಸಿದೆ ಎಂದರು.

ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಅವಧಿಯಲ್ಲಿ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನೀಡಿದ್ದರು. ನಾನು ಸಹ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಬದ್ಧನಾಗಿದ್ದು ಗ್ರಾಮಸ್ಥರು ನನಗೆ ಸಂಪರ್ಕಿಸಿ ಎಂದರು.

ಕಾಮಗಾರಿಗಳು ಗುಣಮಟ್ಟದಿಂದ ಇರಲಿ. ಹೆಚ್ಚುವರಿ ಕಾಮಗಾರಿಗಳ ಅವಶ್ಯಕತೆ ಇದ್ದರೆ, ಮತ್ತೆ ನನ್ನನ್ನು ಭೇಟಿ ಮಾಡಿ, ಅಭಿವೃದ್ಧಿ ಕೆಲಸಗಳಿಗೆ ನಾನು ಎಂದು ಸಹಕರಿಸುತ್ತೇನೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಶಾಸಕರು ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ವಿಚಾರಿಸಿ, ಅವರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಸ್ಥಳದಲ್ಲಿಯೇ ಸಂಬಂಧಪಟ್ಟವರಿಗೆ ಸರಿಪಡಿಸುವಂತೆ ತಾಕೀತು ಮಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ಲೋಕೋಪಯೋಗಿ ಇಲಾಖೆಯ ಎಂಜಿನೀಯರ್ ಶಿವರಾಯ ಹುಡೇದ, ನಿರ್ಮಿತಿ ಕೇಂದ್ರದ ಕಿರಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಾಧರ್, ವ್ಯವಸ್ಥಾಪಕ ಸಾಬಯ್ಯ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಕುಮಾರ್, ಸಂತೋಷ್ ರೆಡ್ಡಿ, ವೈದ್ಯರಾದ ಡೋರತಿ, ಮುಖ್ಯ ಶಿಕ್ಷಕ ಚಂದ್ರಪ್ಪ ಗುಂಜನೂರ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚನ್ನಬಸಪ್ಪ ಜೋಗಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಪ್ಪ ಇದ್ದಲಿ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಣ್ಣ ಇರಿಕೇರಿ, ಶಂಕ್ರಪ್ಪ ದಿಬ್ಬಾ, ರಾಮಣ್ಣ ಕೋಟೆಗೇರಾ, ಸುಭಾಷ್ ಹೊನಗೇರಾ, ಮಾರ್ಕಂಡಪ್ಪ ಮಾನೆಗರ್, ಮೂರ್ತಿ ಚಿಕ್ಕಮಠ್, ಸಿದ್ದಪ್ಪ ಬನ್ನಟ್ಟಿ, ಶಿವಪ್ಪ ಚಿಮಟಗಿ, ವೀರೇಶ್ ವಡಗ ಇದ್ದರು. ವಿಶ್ವರಾಧ್ಯ ಶಿಕ್ಷಕ ತರಬೇತಿ ಕೇಂದ್ರದ ಶಿಕ್ಷಕರು ನಾಡಗೀತೆ ಹಾಡಿದರು. ಬಾಬು ಚವ್ಹಾಣ ನಿರೂಪಿಸಿ, ವಂದಿಸಿದರು.