ಮಹಿಳಾ ಸ್ನೇಹಿ ಗ್ರಾಪಂಗೆ ಆದ್ಯತೆ

| Published : May 05 2025, 12:52 AM IST

ಸಾರಾಂಶ

ಗ್ರಾಪಂ ಹಂತದಲ್ಲಿ ಮಹಾತ್ಮಗಾಂಧಿ ನರೇಗಾ, 15ನೇ ಹಣಕಾಸು ಮತ್ತು ಗ್ರಾಪಂ ನಿಧಿ ಹಣವನ್ನು ದೂರದೃಷ್ಠಿ ಯೋಜನೆ ರೂಪಿಸಿ ಯೋಜನೆ ಅನುಷ್ಠಾನ ಮಾಡಬೇಕು.

ಕುಕನೂರು: ಪ್ರತಿ ಗ್ರಾಪಂಗಳು ಮಹಿಳಾ ಸ್ನೇಹಿ ಆಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೆಯ ಹೇಳಿದರು.

ತಾಲೂಕಿನ ತಳಕಲ್ ಗ್ರಾಪಂನಲ್ಲಿ ಜರುಗಿದ ವಿಶೇಷ ಮಹಿಳಾ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿಶೇಷ ಸ್ಥಾನಮಾನ ಹಾಗೂ ಸಮಾನ ಅವಕಾಶ ಕಲ್ಪಿಸಿದೆ. ಮಹಿಳೆಯರು ಕುಟುಂಬ ಹಾಗೂ ಸಮಾಜದ ಗೌರವದ ಪ್ರತೀಕ. ಲಿಂಗತ್ವ ತಾರತಮ್ಯ ಇಲ್ಲದೇ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕು. ಶಿಕ್ಷಣವು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುತ್ತದೆ. ಪಾಲಕರು ಮಕ್ಕಳ ಓದಿನಲ್ಲಿ ಇಚ್ಚಾಶಕ್ತಿ ಹೆಚ್ಚಿಸಬೇಕು ಎಂದರು.

ಗ್ರಾಪಂ ಹಂತದಲ್ಲಿ ಮಹಾತ್ಮಗಾಂಧಿ ನರೇಗಾ, 15ನೇ ಹಣಕಾಸು ಮತ್ತು ಗ್ರಾಪಂ ನಿಧಿ ಹಣವನ್ನು ದೂರದೃಷ್ಠಿ ಯೋಜನೆ ರೂಪಿಸಿ ಯೋಜನೆ ಅನುಷ್ಠಾನ ಮಾಡಬೇಕು. ವಿಶೇಷವಾಗಿ ಮಹಿಳಾ ಸ್ನೇಹಿ ಗ್ರಾಪಂಗೆ ಒತ್ತು ನೀಡಬೇಕು. ಸಂಜೀವಿನಿ ಯೋಜನೆಯಡಿ ಹೂಡಿಕೆ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಕರ್ಯ ಪಡೆದು ಸಣ್ಣ ಸಣ್ಣ ಉದ್ಯಮ ಮಾಡುತ್ತ ಕುಟುಂಬದ ಕಣ್ಣಾಗಿ ಮಹಿಳೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಗ್ರಾಮದ ನೈರ್ಮಲ್ಯದ ದೃಷ್ಠಿಯಿಂದ ಪ್ರತಿಯೋಂದು ಗ್ರಾಪಂಗೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಅವಶ್ಯಕತೆ ಇದ್ದು, ತಳಕಲ್ ಗ್ರಾಮದಲ್ಲಿ 18 ಗುಂಟೆ ಸರ್ಕಾರಿ ಜಮೀನು ಮಂಜೂರಿಗೆ ಪತ್ರ ಬರೆಯಲು ಸೂಚಿಸಿದರು.

ತಾಪಂ ಇಒ ಸಂತೋಷ ಬಿರಾದರ ಪಾಟೀಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರನಗೌಡ ಚೇನ್ನವೀರಗೌಡ್ರು, ಕಾರ್ಯದರ್ಶಿ ಆದಿಬಸಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ಜಹಿರಾ ಬೇಗಂ, ಉಪಾಧ್ಯಕ್ಷೆ ಜಿಂದಾಬಿ ಗುಡಗುಡಿ, ಸದಸ್ಯರಾದ ತಿಮ್ಮಣ್ಣ ಚೌಡಿ, ಉಮೇಶ್ ಗೌಡ ಪೋಲೀಸ್ ಪಾಟೀಲ್, ಕವಿತಾ ಹೈತಾಪೂರ, ಚೈತ್ರಾ ಹಿರೇಗೌಡ್ರ, ರೇಣುಕಾ ಮಡಿವಾಳರ್, ಮಹಮ್ಮದ್ ಶಿರಾಜ್ಜುದ್ದೀನ್, ದೇವಕ್ಕ ಬಂಗೀ, ಮಂಜುಳಾ ಶಿವವಸನಗೌಡ ಪಿಡ್ಡನಗೌಡ್ರ, ವಿಜಯಲಕ್ಷ್ಮೀ, ವೆಂಕೋಬಪ್ಪ ಗುನ್ನಳ್ಳಿ, ಸ್ವ-ಸಹಾಯ ಸಂಘದ ಮಹಿಳೆಯರು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರಿದ್ದರು.