ತುಮಕೂರು: ದೇಶದ ಕ್ರೀಡಾ ಕ್ಷೇತ್ರದಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿ ಮಾಡಲು ಹಾಗೂ ಹೊಸ ಕ್ರೀಡಾಪಟುಗಳ ಅನ್ವೇಷಣೆಗಾಗಿ ಸಂಸತ್ ಕ್ರೀಡಾ ಮಹೋತ್ಸವ ಅಭಿಯಾನ ಆರಂಭಿಸಿದ್ದಾರೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು
ತುಮಕೂರು: ದೇಶದ ಕ್ರೀಡಾ ಕ್ಷೇತ್ರದಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿ ಮಾಡಲು ಹಾಗೂ ಹೊಸ ಕ್ರೀಡಾಪಟುಗಳ ಅನ್ವೇಷಣೆಗಾಗಿ ಸಂಸತ್ ಕ್ರೀಡಾ ಮಹೋತ್ಸವ ಅಭಿಯಾನ ಆರಂಭಿಸಿದ್ದಾರೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತುಮಕೂರು ಲೋಕಸಭಾ ವ್ಯಾಪ್ತಿಯ ಸಂಸದ್ ಕ್ರೀಡಾ ಮಹೋತ್ಸವದ ಅಂಗವಾಗಿ ನಡೆದ ಕಬಡ್ಡಿ ಮತ್ತು ಖೋ ಖೋ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಭಾರತದಲ್ಲಿಯೇ ಆಯೋಜನೆಗೊಳ್ಳಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಾದ ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ ಗೇಮ್ಸ್‌ಗಳಲ್ಲಿ ಭಾರತ ಮತ್ತಷ್ಟು ಸಾಧನೆ ಮೆರೆಯುವ ದೃಷ್ಟಿಯಿಂದ ಪ್ರಧಾನಿ ಮೋದಿ ದೇಶದೆಲ್ಲೆಡೆ ಕ್ರೀಡಾ ಉತ್ತೇಜನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದಾರೆ ಎಂದರು.ಕ್ರೀಡೆಯು ವಿಶ್ವಾಸಕ್ಕೆ, ಆತ್ಮೀಯತೆಗೆ, ಸ್ನೇಹಕ್ಕೆ ದೊಡ್ಡ ಸಂಕೇತವಾಗಿದೆ. ದೇಶ-ದೇಶಗಳ ನಡುವೆ ಸ್ನೇಹ ಮೂಡಲು ಕ್ರೀಡೆ ಸಹಕಾರಿಯಾಗುತ್ತದೆ. ಇದೇ ಕಾರಣಕ್ಕೆ ಪ್ರಧಾನಿಯವರು ಕ್ರೀಡೆಗೆ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ಇದೂವರೆಗೂ ಕ್ರೀಡೆಗೆ ಇಷ್ಟೊಂದು ಆದ್ಯತೆ ಸಿಕ್ಕಿರಲಿಲ್ಲ. ಮೋದಿಯವರು 3700 ಕೋಟಿ ುರು.ಗಳನ್ನು ಕ್ರೀಡೆಗಾಗಿ ಮೀಸಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಮೃದ್ಧ ಭಾರತ ನಿರ್ಮಾಣದಲ್ಲಿ ಕ್ರೀಡೆ ಮತ್ತು ಆರೋಗ್ಯ ಪ್ರಮುಖ ಅಂಶಗಳಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು .ಸೋಮಣ್ಣ ಹೇಳಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಎಸ್.ಪಿ. ಚಿದಾನಂದ್, ಪ್ರದೀಪ್‌ಕುಮಾರ್, ಭೈರಣ್ಣ ಮೊದಲಾದವರು ಭಾಗವಹಿಸಿದ್ದರು.ಈ ವೇಳೆ ಭೂಮಿ ಮತ್ತು ಚಾಮುಂಡೇಶ್ವರಿ ತಂಡಗಳ ನಡುವೆ ಕಬಡ್ಡಿ ಪಂದ್ಯಾವಳಿ ನಡೆದು ಚಾಮುಂಡೇಶ್ವರಿ ತಂಡ ಗೆಲುವು ಸಾಧಿಸಿತು. ನಂತರ ನಡೆದ ವಿವೇಕಾನಂದ ಹಾಗೂ ವಿದ್ಯಾವಾಹಿನಿ ತಂಡಗಳ ನಡುವಿನ ಖೋ ಖೋ ಪಂದ್ಯಾವಳಿಯಲ್ಲಿ ವಿವೇಕಾನಂದ ತಂಡ ವಿಜಯಿಯಾಯಿತು. ಎರಡೂ ಪಂದ್ಯಾವಳಿಗಳನ್ನು ವೀಕ್ಷಿಸಿದ ಸಚಿವ ವಿ.ಸೋಮಣ್ಣ ಕೊನೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.