ಸಚಿವ ಟಿ.ರಘುಮೂರ್ತಿ ಅಭಿಮತ । ಪರಶುರಾಂಪುರದಲ್ಲಿ ನೂತನ ಸಚಿವರಿಗೆ ಗೌರವ ಸನ್ಮಾನ

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳಿಗೆ ಬೆಲೆ ನೀಡಿ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಪಕ್ಷದ ಬೆಳವಣಿಗೆಗೆ ಅತ್ಯಗತ್ಯ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.

ನಗರದ ಮುಖ್ಯ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಎಲ್ಲರಿಗೂ ತಕ್ಷಣಕ್ಕೆ ಅವಕಾಶ ಸಿಗುವುದಿಲ್ಲ 2008ರಲ್ಲಿ ಟಿಕೆಟ್ ಸಿಗದಿದ್ದಾಗ ನೀವು ತಾಳ್ಮೆ ವಹಿಸಿದಂತೆ, ಮುಂದಿನ ಸಂದರ್ಭಗಳಲ್ಲಿ ಅವಕಾಶಗಳು ದೊರೆತಿವೆ. ರಾಜಕಾರಣದಲ್ಲಿ ತಾಳ್ಮೆ, ಸಮಾಧಾನ ಮತ್ತು ಹೊಂದಾಣಿಕೆ ಅತ್ಯಂತ ಮುಖ್ಯವಾದ ಗುಣಗಳು. ಸಚಿವ ಸ್ಥಾನದ ಜತೆಗೆ ಜನರ ನಿರೀಕ್ಷೆಗಳಿಗೆ ತಕ್ಕಂತೆ ಹಾಗೂ ರಾಜ್ಯದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ಜನರ ನಿರೀಕ್ಷೆಗೆ ಅನುಗುಣವಾಗಿ ನಿರ್ವಹಿಸಬೇಕಿದೆ ಎಂದು ಹೇಳಿದರು.

ಚಳ್ಳಕೆರೆ ಮತ್ತು ಹೊಸದುರ್ಗ ತಾಲೂಕುಗಳನ್ನು ಮಳೆಗಾಲದ ತಾಲೂಕುಗಳೆಂದು ಪರಿಗಣಿಸಲಾಗುತ್ತದೆ. 2020ರ ಕೇಂದ್ರ ಸರ್ಕಾರದ ನಿಯಮ ಪ್ರಕಾರ ಮೂರು ವಾರ ಸತತವಾಗಿ ಮಳೆ ಬಾರದಿದ್ದರೆ ಮಾತ್ರ ಬರಗಾಲ ಎಂದು ಘೋಷಿಸಲಾಗುತ್ತದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ರೈತರಿದ್ದು, 2.5 ಲಕ್ಷಕ್ಕೂ ಅಧಿಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ವಿಮೆ ಮಾಡಿಸಿದ ರೈತರಿಗೆ ಕೇಂದ್ರ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ನಿಯಮಾನುಸಾರ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್‌.ಮಂಜುನಾಥ ಮಾತನಾಡಿ, ತಾಲೂಕು ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಸಚಿವರು ಶ್ರಮ ವಹಿಸುತ್ತಿದ್ದಾರೆ, ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ 5 ಶಾಸಕರಲ್ಲಿ ರಘುಮೂರ್ತಿಯವರು ಅಬಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದರು.

ಮೆರವಣಿಗೆಯಲ್ಲಿ ವಿವಿಧ ಜಾನಪದಾ ಕಲಾ ತಂಡಗಳೊಂದಿಗೆ ಮತ್ತು ಮಹಿಳೆಯರ ಕುಂಭಗಳಿಂದ ಅದ್ಧೂರಿಯಾಗಿ ಬೃಹತ್ ಹೂವಿನ ಹಾರ ಹಾಕುವುದರ ಮೂಲಕ ಸಚಿವರಿಗೆ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ಶಶಿಧರ, ಚೌಳೂರು ಪ್ರಕಾಶ, ಮಾಜಿ ಅಧ್ಯಕ್ಷ ರುದ್ರೇಶ, ಚನ್ನಕೇಶವ, ಎ.ನಾಗೇಶ, ಎ.ನಾಗರಾಜ, ರಾಜಶೇಖರ, ನಾಗಭೂಷಣ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.