ಅಂಬೇಡ್ಕರ್ ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತರಲ್ಲ. ಇಡೀ ವಿಶ್ವದ ಆಸ್ತಿಯಾಗಿದ್ದಾರೆ ನಾವುಗಳು ತಂದೆ-ತಾಯಿಗಳಿಗೆ ನೀಡುವ ಗೌರವಕ್ಕಿಂತ ಮೂರು ಪಟ್ಟು ಹೆಚ್ಚಿನ ಗೌರವವನ್ನು ಅಂಬೇಡ್ಕರ್ ಅವರಿಗೆ ಸಲ್ಲಿಸಬೇಕು.

ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ತಾಕೀತು

ಕನ್ನಡಪ್ರಭ ವಾರ್ತೆ ಕೋಲಾರ

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಯಾರ ವೈಯಕ್ತಿಕ ಪ್ರತಿಷ್ಠೆಗೂ ಮನ್ನಣೆ ನೀಡದೆ, ಸಂವಿಧಾನ ಶಿಲ್ಪಿಗೆ ಸಲ್ಲಿಸುವ ಗೌರವ ಹಾಗೂ ಪುತ್ಥಳಿಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲಾಡಳಿತ ಕಾನೂನು ನಿಯಮಗಳ ಮಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸೂಕ್ತ ಸ್ಥಳ ಗುರುತಿಸಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿದ್ದು, ಎಲ್ಲರೂ ಜಿಲ್ಲಾಡಳಿತದ ಅಂತಿಮ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಪಂ ವ್ಯಾಪ್ತಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತರಲ್ಲ. ಇಡೀ ವಿಶ್ವದ ಆಸ್ತಿಯಾಗಿದ್ದಾರೆ ನಾವುಗಳು ತಂದೆ-ತಾಯಿಗಳಿಗೆ ನೀಡುವ ಗೌರವಕ್ಕಿಂತ ಮೂರು ಪಟ್ಟು ಹೆಚ್ಚಿನ ಗೌರವವನ್ನು ಅಂಬೇಡ್ಕರ್ ಅವರಿಗೆ ಸಲ್ಲಿಸಬೇಕು. ಅವರು ನೀಡಿದ ಸಂವಿಧಾನದಿಂದಲೇ ನಾವೆಲ್ಲರೂ ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಆದ್ದರಿಂದ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸದೆ ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಹೋಗಬೇಕಾಗಿದೆ ಎಂದರು.

ಪುತ್ಥಳಿ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ತಾವು ಹಾಗೂ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಭರಿಸಲಿದ್ದಾರೆ. ಸರ್ಕಾರಿ ಅಥವಾ ಗ್ರಾಮ ಪಂಚಾಯಿತಿಗೆ ಸೇರಿದ ಸೂಕ್ತ ಜಾಗ ದೊರೆತರೆ ಅಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡಲು ಸಹ ಸಿದ್ಧರಿದ್ದು ಅದರ ಜೊತೆಗೆ ಪುತ್ಥಳಿ ಸಹ ನಿರ್ಮಾಣ ಮಾಡಲು ಸಿದ್ದವಿದ್ದು ಇದು ಗ್ರಾಮಸ್ಥರ ಶುಭಕಾರ್ಯಗಳಿಗೂ ಅಂಬೇಡ್ಕರ್ ಭವನ ಅನುಕೂಲವಾಗಲಿದೆ ಎಂದರು

ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಸಾರ್ವಜನಿಕ ರಸ್ತೆ, ಚರಂಡಿ, ವಿದ್ಯುತ್ ಪರಿವರ್ತಕಗಳ ಸಮೀಪ ಅಥವಾ ವಿವಾದಿತ ಸ್ಥಳಗಳಲ್ಲಿ ಪುತ್ಥಳಿ ನಿರ್ಮಿಸಲು ಅವಕಾಶವಿಲ್ಲ. ಕಾನೂನು ಮಾರ್ಗಸೂಚಿಗಳ ಪ್ರಕಾರ ಪುತ್ಥಳಿಯ ಗೌರವ, ಸುರಕ್ಷತೆ ಮತ್ತು ಸಂರಕ್ಷಣೆಗೆ ಸೂಕ್ತವಾದ ಸ್ಥಳವನ್ನು ಗುರುತಿಸಲಾಗುವುದು ಎಂದರು.

ಸಭೆಯಲ್ಲಿ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವೈ.ಶಿವಕುಮಾರ್, ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ ಜಿಪಂ ಸಿಇಒ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಉಪವಿಭಾಗಾಧಿಕಾರಿ ಡಾ. ಎಂ. ನಯನ, ಡಿವೈಎಸ್‌ಪಿ ವಸಂತ್ ಕುಮಾರ್, ತಾಪಂ ಇಒ ಮಂಜುನಾಥ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ವಿವಿಧ ಸಂಘಟನೆಗಳ ಮುಖಂಡರಾದ ಎನ್. ಅಂಬರೀಶ್, ಮೇಡಹಾಳ ಮುನಿಅಂಜಿನಪ್ಪ, ಡಿಪಿಎಸ್ ಮುನಿರಾಜು, ಕುಡುವನಹಳ್ಳಿ ಆನಂದ್, ವಿಜಯಲಕ್ಷ್ಮಿ, ಶಾಂತಮ್ಮ ಹುಲ್ಲಂಕಲ್ಲು ಗ್ರಾಮದ ಹಿರಿಯ ಮುಖಂಡ ಈರಣ್ಣ ಇದ್ದರು.