ಸಾರಾಂಶ
- ಹೊಸದುರ್ಗ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ ಸ್ವೀಕಾರ - - - ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಮಸ್ಯೆ, ಒತ್ತಡ ಎನ್ನುವುದು ಎಲ್ಲರಿಗೂ ಇದ್ದೇ ಇರುತ್ತದೆ. ಸಮಸ್ಯೆಗಳ ನಡುವೆಯೇ ನಮ್ಮ ಜೀವನವನ್ನು ಸಾಗಿಸಬೇಕಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿದರೆ ಸರ್ಕಾರ ಯಾಕೆ ಬೇಕು? ಕಂದಾಯ ಇಲಾಖೆ, ಪಂಚಾಯಿತಿ ಯಾಕೆ ಬೇಕು? ಸಮಸ್ಯೆ ಎಂಬುದು ನಿತ್ಯ ನಿರಂತರವಾಗಿದ್ದು, ಅವನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಅಂತಹ ಸಮಸ್ಯೆಗಳ ನಡುವೆಯೇ ತಮ್ಮ ಕೈಲಾದ ಕೆಲಸ, ಸೇವೆಯನ್ನು ಜನರಿಗೆ ಮಾಡಬೇಕು ಎಂದರು.ಈ ಹಿಂದೆ ಸರ್ಕಾರಿ ನೌಕರರಿಗೆ ಅಪಾರ ಗೌರವವಿತ್ತು, ಈಗಲೂ ಇದೆ. ಆದರೆ, ಅದಕ್ಕೆ ಸರಿಯಾಗಿ ನೌಕರರು ನಡೆದುಕೊಳ್ಳಬೇಕು. ಇರುವಂತಹ ವ್ಯವಸ್ಥೆಯಲ್ಲಿ ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಒತ್ತಡವನ್ನು ಕಡಿಮೆಮಾಡಿಕೊಂಡು ಗುಣಮಟ್ಟದ ಸೇವೆಯನ್ನು ಜನರಿಗೆ ನೀಡುವುದೇ ಸರ್ಕಾರಿ ನೌಕರರ ಕರ್ತವ್ಯವಾಗಿದೆ. ರಾಜ್ಯದಲ್ಲಿ 2.70 ಸಾವಿರ ಹುದ್ದೆಗಳು ಖಾಲಿಯಿವೆ. ಎಲ್ಲ ಇಲಾಖೆಗಳಲ್ಲಿಯೂ ಶೇ.40ರಷ್ಟು ಹುದ್ದೆಗಳು ಖಾಲಿಯಿವೆ. ಇವನ್ನೆಲ್ಲಾ ಸರ್ಕಾರ ತುಂಬಬೇಕಾದರೆ ₹13 ಸಾವಿರ ಕೋಟಿ ಬೇಕಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ನೌಕರರ ಸಂಘದ ತನ್ನ ನೌಕರರ ಕಲ್ಯಾಣಕ್ಕೆ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.
ಇಂದು ಸರ್ಕಾರ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹದ ದಿನವನ್ನಾಗಿ ಆಚರಿಸುತ್ತಿದೆ. ಸಿದ್ಧಗಂಗಾ ಶ್ರೀಗಳಿಗೂ ಹೊಸದುರ್ಗಕ್ಕೂ ಅವಿನಾಭಾವ ಸಂಬಂಧವಿದೆ. ಸುಮಾರು 50 ವರ್ಷಗಳ ಹಿಂದೆ ಈ ಭಾಗದಲ್ಲಿ ಶಿಕ್ಷಣವಿಲ್ಲದಿದ್ದಾಗ ಉಚಿತ ಶಿಕ್ಷಣ, ಅನ್ನ ಆಶ್ರಯವನ್ನು ನೀಡಿದ್ದರ ಫಲವಾಗಿ ಈ ಭಾಗದ ಅನೇಕರು ಶಿಕ್ಷಣವಂತಾರಾದರು. ಇಂದಿನ ಬಹುತೇಕ ಸರ್ಕಾರಿ ನೌಕರರು ಸಿದ್ಧಗಂಗಾ ಮಠದ ಶಾಲೆಯಲ್ಲಿಯೇ ಓದಿದ್ದಾರೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಸಿದ್ಧಗಂಗಾ ಶ್ರೀಗಳು ಮಾಡಿದ್ದಾರೆ ಎಂದರು.ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆಡುವ ಮಾತಿಗೂ ಆತನ ನಡೆಗೂ ಸಾಮ್ಯತೆ ಇರಬೇಕು. 24 ಗಂಟೆಯೊಳಗೆ ಮಾಯವಾಗುವ ತಮ್ಮ ಮೊಬೈಲ್‌ನಲ್ಲಿ ಹಾಕಿಕೊಳ್ಳುವ ಸ್ಟೇಟಸ್ ನಮ್ಮ ನಡತೆಯನ್ನು ಯಾವತ್ತೂ ಗುರುತಿಸುವುದಿಲ್ಲ. ನಮ್ಮ ಅಂತರಾಳದಲ್ಲಿ ಇಳಿದು ನಮ್ಮ ನಡೆ, ನುಡಿ ಕಲೆ ಉತ್ತಮವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಸರ್ಕಾರ ನಮಗೆ ಒಳ್ಳೆ ಸಂಬಳ ಕೊಡುತ್ತದೆ. ಆದರೆ, ಸರ್ಕಾರದ ಪರವಾಗಿ ನಮ್ಮ ಸೇವೆಯ ಪ್ರಾಮಾಣಿಕತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರ್ಕಾರದ ಆಡಳಿತ ಸುಗಮವಾಗಿ ನಡೆಯಲು ನಾವು ಚಕ್ರಗಳಿದ್ದಂತೆ, ಅದು ಸುಲಲಿತವಾಗಿ ನಡೆದರೆ ಮಾತ್ರ ಆಡಳಿತ ಸುಗಮವಾಗಿ ನಡೆಯುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಶಾಖೆ ಅಧ್ಯಕ್ಷ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಮುಖ್ಯ ಅಥಿತಿಗಳಾಗಿ ಯುವ ಮುಖಂಡ ಅರುಣ್ ಗೋವಿಂದಪ್ಪ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕು ಶಾಖೆಗಳ ಅಧ್ಯಕ್ಷರು ಹಾಗೂ ತಾಲೂಕುಮಟ್ಟದ ಆಧಿಕಾರಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖ್ಯಾತ ಸಾಹಿತಿ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ನಾಗರಾಜ್ ಕಲ್ಕಟ್ಟೆ, ಯಗಟಿ ಸತೀಶ್ ನೌಕರರ ವೃತ್ತಿ ಪರತೆ ಮತ್ತು ಸಮಯ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು.
- - - ಟಾಪ್ ಕೋಟ್ಗ್ಯಾರಂಟಿಗಳ ನಡುವೆ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಸವಲತ್ತು ಪಡೆದುಕೊಂಡಿರುವುದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಸುಮ್ಮನೆ ಕೂತು ಮಾತನಾಡುವುದು ಸುಲಭ. ಆದರೆ ಸ್ಥಾನದಲ್ಲಿ ಕುಳಿತು ನಿರ್ವಹಣೆ ಮಾಡುವುದು ಕಷ್ಟ. ನಾವು ಮುಖ್ಯಮಂತ್ರಿಗಳ ಮನೆ ಕಾಯಬೇಕು, ಸರ್ಕಾರದಿಂದ ಬರುವ ಬೆದರಿಕೆಗಳನ್ನು ಎದುರಿಸಬೇಕು. ಆಗ ಮಾತ್ರ ನಮ್ಮ ಕೆಲಸ ಸಾಧಿಸಲು ಸಾಧ್ಯ
- ಸಿ.ಎಸ್. ಷಡಕ್ಷರಿ, ರಾಜ್ಯಾಧ್ಯಕ್ಷ, ಸರ್ಕಾರಿ ನೌಕರರ ಸಂಘ- - - -21ಎಚ್‌ಎಸ್‌ಡಿ2:
ಹೊಸದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.