ಸಾರಾಂಶ
- ಅಮ್ಮ ಫೌಂಡೇಷನ್ ಆಶ್ರಯದಲ್ಲಿ ನಾಗರಮಕ್ಕಿಯಲ್ಲಿ ಉಚಿತ 27 ನೇ ಆರೋಗ್ಯ ಶಿಬಿರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಮ್ಮ ಫೌಂಡೇಷನ್ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅಮ್ಮ ಫೌಂಡೇಷನ್ ಅಧ್ಯಕ್ಷ ತುಮ್ಕಾನೆ ಸುಧಾಕರ ಎಸ್. ಶೆಟ್ಟಿ ತಿಳಿಸಿದರು.ಭಾನುವಾರ ನಾಗರಮಕ್ಕಿ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಅಮ್ಮ ಫೌಂಡೇಷನ್ ನಿಂದ 27 ನೇ ಉಚಿತ ಆರೋಗ್ಯ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರ ಹಿಂದುಳಿದಿದೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯ ಕೊರತೆ ಇರುವ ಕ್ಷೇತ್ರಗಳಲ್ಲಿ ಶೃಂಗೇರಿ ಕ್ಷೇತ್ರವೂ ಒಂದಾಗಿದೆ. ಮೂಲ ಸೌಕರ್ಯದ ಕೊರತೆಯಿಂದ ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಈ ಭಾಗದ ಬಡವರು, ಹಿಂದುಳಿದವರು, ದಲಿತರಿಗೆ ತೊಂದರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ ಎಂದರು. ಅಮ್ಮ ಫೌಂಡಷನ್ ನಿಂದ 10 ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಗ್ರಾಮೀಣ ಭಾಗದ ಬಡವರಿಗೆ ಆರೋಗ್ಯ ಸೇವೆ ಸಿಗಬೇಕು ಎಂಬುದೇ ಅಮ್ಮ ಫೌಂಡೇಷನ್ ಮುಖ್ಯ ಉದ್ದೇಶ. ಸೇವೆಯೇ ನಮ್ಮ ಆದ್ಯತೆ.ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ.ಇಲ್ಲಿ ನೇತ್ರ ಪರೀಕ್ಷೆ ಮಾಡಿಸಿದ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದರೆ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿ ನಂತರ ಮನೆಗೆ ಕರೆ ತಂದು ಬಿಡಲಾಗುವುದು. ಶಸ್ತ್ರ ಚಿಕಿತ್ಸೆ ಮಾಡಿಸಿದ ನಂತರ ವೈದ್ಯರು ಸೂಚಿಸಿದ ದಿನ ಮತ್ತೆ ಶಿಬಿರ ನಡೆದ ಸ್ಥಳಕ್ಕೆ ಕರೆತಂದು ಮರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.ನೇತ್ರ ದಾನ ದೊಡ್ಡ ದಾನವಾಗಿದೆ. ನಮ್ಮ ನಂತರ ನೇತ್ರ ದಾನ ಮಾಡಿದರೆ ಬೇರೆಯವರ ಬಾಳಿಗೆ ಬೆಳಕಾಗಲಿದೆ. ಅಮ್ಮ ಎಂದರೆ ದೇವರಿದ್ದಂತೆ. ಪ್ರತಿಯೊಬ್ಬರೂ ತಮ್ಮ ತಂದೆ, ತಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕಾಣದ ದೇವರಿಗೆ ಕೈ ಮುಗಿಯುವುದಕ್ಕಿಂತ ಕಾಣುವ ದೇವರಾದ ಅಮ್ಮನ ಸೇವೆ ಮಾಡಬೇಕು ಎಂದು ಕರೆ ನೀಡಿದರು. ಹಿರಿಯ ಸಹಕಾರಿ ಧುರೀಣ ಯಡಗೆರೆ ಸುಬ್ರಮಣ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಮ್ಮ ಪೌಂಡೇಷನ್ ಆರೋಗ್ಯ ಕಾರ್ಯಕ್ರಮ ನಡೆಸುವ ಮೂಲಕ ಸಮಾಜದ ಎಲ್ಲರೂ ಆರೋಗ್ಯವಾಗಿರಬೇಕು ಎಂಬ ಆಶಯಹೊಂದಿದೆ. 40 ವರ್ಷದ ನಂತರ ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡಬೇಕು. ಪ್ರಸ್ತುತ ಚಿಕ್ಕ ವಯಸ್ಸಿನವರಿಗೂ ಮಧು ಮೇಹ ಬರುತ್ತಿದೆ. ಮಣಿಪಾಲ ಆಸ್ಪತ್ರೆ ವೈದ್ಯರ ತಂಡ ಆಗಮಿಸಿದ್ದು ಪ್ರತಿಯೊಬ್ಬರೂ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು. ಸುಧಾಕರ ಎಸ್ . ಶೆಟ್ಟಿ ನೇತೃತ್ವದ ಅಮ್ಮ ಫೌಂಡೇಷನ್ ಉದ್ಯೋಗ ಮೇಳದಿಂದ ಸಾವಿರಾರರು ನಿರುದ್ಯೋಗ ಯುವ ಜನರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇದೇ ರೀತಿ ಗಾರ್ಮೆಂಟ್ಸ್ ಪ್ರಾರಂಭಿಸಿದರೆ ಹಲವಾರು ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಅಮ್ಮ ಫೌಂಡೇಷನ್ ನ ಸುಧಾಕರ ಶೆಟ್ಟಿ ಸಜ್ಜನ ರಾಜಕಾರಣಿ. ಮುಂದೆ ಶೃಂಗೇರಿ ಶಾಸಕರಾಗಿ ಆಯ್ಕೆಯಾಗಿ ಬರಲಿ ಎಂದು ಆಶಿಸಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಅಮ್ಮ ಫೌಂಡೇಷನ್ ಮೂಲಕ ಸುಧಾಕರ ಎಸ್. ಶೆಟ್ಟಿ ಸಮಾಜ ಸೇವೆ ಮಾಡುತ್ತಿದ್ದು ಶೃಂಗೇರಿ ಕ್ಷೇತ್ರದ ಶೇ. 50 ರಷ್ಟು ಜನರಿಗೆ ಅವರ ಸೇವೆ ತಲುಪಿದೆ. ಸಮಾಜದಲ್ಲಿ ಎಷ್ಟೇ ಶ್ರೀಮಂತರಾದರೂ ಸಮಾಜಕ್ಕಾಗಿ ಹಣ ಖರ್ಚು ಮಾಡುವವರು ಕಡಿಮೆ. ಸದಾ ಒತ್ತಡದಲ್ಲಿ ಬದುಕು ತ್ತಿರುವ ಇಂದಿನ ಜನರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಕಣ್ಣು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು ಕಣ್ಣಿನ ಆರೋಗ್ಯದ ಬಗ್ಗೆ ಗಮನ ಇಡಬೇಕು ಎಂದರು. ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್ ಮಾತನಾಡಿ, ಸುಧಾಕರ ಶೆಟ್ಟಿ ಅವರು ಅಮ್ಮನ ಹೆಸರಿನಲ್ಲಿ ಫೌಂಡೇಷನ್ ಹುಟ್ಟು ಹಾಕಿ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಮೂಲ ಸೌಕರ್ಯ, ಆರೋಗ್ಯ ಸೇವೆ ನೀಡುತ್ತಿದ್ದಾರೆ. ಸೆ. 16 ರಂದು ಸೀಗುವಾನಿಯಲ್ಲೂ ಅಮ್ಮ ಫೌಂಡೇಷನ್ ನಿಂದ ಆರೋಗ್ಯ ಶಿಬಿರ ನಡೆಯಲಿದೆ ಎಂದರು. ಜೆಡಿಎಸ್ ಮುಖಂಡ ಜಯಪುರದ ಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಮ್ಮ ಫೌಂಡೇಷನ್ ಈಗಾಗಲೇ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳಲ್ಲಿ 26 ಉಚಿತ ಆರೋಗ್ಯ ಶಿಬಿರ ನಡೆಸಿದ್ದು ಈಗ 27 ನೇ ಆರೋಗ್ಯ ಶಿಬಿರ ನಡೆಸುತ್ತಿದೆ. ಅಮ್ಮ ಫೌಂಡೇಷನ್ ನಿಂದ 10 ಸಾವಿರ ಪುಡ್ ಕಿಟ್ ವಿತರಿಸಲಾಗಿದೆ. 65 ಜನರಿಗೆ ಗಾಲಿ ಖುರ್ಚಿ ನೀಡಿದ್ದಾರೆ. ಸುಧಾಕರ ಶೆಟ್ಟಿ ಅವರ ಸೇವೆ ಗುರುತಿಸಿ ಅವರಿಗೆ ವಿಜಯರತ್ನ ಎಂಬ ಪ್ರಶಸ್ತಿ ಲಭಿಸಿದೆ. ಸಾವಿರಾರು ಕುಟುಂಬದವರಿಗೆ ಆರ್ಥಿಕ ನೆರವು ನೀಡಿದ್ದಾರೆ ಎಂದರು. ಅತಿಥಿಗಳಾಗಿ ಸೀತೂರು ಗ್ರಾಪಂ ಸದಸ್ಯ ಎನ್.ಪಿ.ರಮೇಶ್, ಜೆಡಿಎಸ್ ಮುಖಂಡರಾದ ಉಪೇಂದ್ರ ಗೌಡ, ಬಿ.ಟಿ.ರವಿ, ಶಿವಣ್ಣ, ಯೋಗೇಂದ್ರ, ಸುಬೋದ್, ನಾಗರಮಕ್ಕಿ ದುರ್ಗಾದೇವಸ್ಥಾನ ಸಮಿತಿ ಅಧ್ಯಕ್ಷ ಮೂಡ್ಲಿ ವೆಂಕಟೇಶ್, ಉದ್ಯಮಿ ಶೇಖರ ಶೆಟ್ಟಿ ಇದ್ದರು. ಆರೋಗ್ಯ ಶಿಬಿರಕ್ಕೆ ಮಣಿಪಾಲ ಕೆಎಂಸಿ ವೈದ್ಯರ ತಂಡ ಆಗಮಿಸಿದ್ದು 170 ಜನರು ತಮ್ಮ ನೇತ್ರ ಪರೀಕ್ಷೆ ಮಾಡಿಸಿಕೊಂಡರು. ಇವರಲ್ಲಿ 20 ಜನರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದರು. ನರಸಿಂಹರಾಜಪುರ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಸುಗರ್ ಹಾಗೂ ಬಿಪಿ ಪರೀಕ್ಷೆ ನಡೆಸಿದರು.